ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿ ತಾರಕಕ್ಕೇರಿದೆ. ಫೆಬ್ರವರಿ 4ರಂದು ನಡೆದ ಅನಿರೀಕ್ಷಿತ ಘಟನೆಯು ಸದನದ ಕಲಾಪವನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ, ಪ್ರತಿಪಕ್ಷಗಳ ಮಹಿಳಾ ಸಂಸದರು ಪ್ರಧಾನಿಯವರ ಪೀಠದ ಸಮೀಪ ಧಾವಿಸಿ, ಘೋಷಣೆಗಳನ್ನು ಕೂಗುತ್ತಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯ ಮಹಿಳಾ ಸಂಸದರು, ಈಗ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈಗಾಗಲೇ ಪ್ರತಿಪಕ್ಷಗಳ ಮಹಿಳಾ ಸಂಸದರು ಸರ್ಕಾರದ ವಿರುದ್ಧ ಸ್ಪೀಕರ್ಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಈಗ ಬಿಜೆಪಿಯ ಮಹಿಳಾ ಸಂಸದರು ಒಗ್ಗೂಡಿ ಪ್ರತಿಭಟನಾ ನಿರತ ಸಂಸದರ ನಡವಳಿಕೆಯನ್ನು ಖಂಡಿಸಿದ್ದಾರೆ. ಪ್ರಧಾನಿಯವರ ಕುರ್ಚಿಯನ್ನು ಸುತ್ತುವರೆದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ವಿವರಿಸಲಾಗಿದೆ.
ಸದನದ ಘನತೆಗೆ ಕುಂದು ತರುವ ರೀತಿಯಲ್ಲಿ ವರ್ತಿಸಿದ ಸಂಸದರನ್ನು ಅಮಾನತುಗೊಳಿಸಬೇಕು ಅಥವಾ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂಬುದು ಆಡಳಿತ ಪಕ್ಷದ ಒತ್ತಾಯವಾಗಿದೆ.
ಇದನ್ನೂ ಓದಿ | ಎಂಎಸ್ಐಎಲ್ ಚಿಟ್ಸ್ಗೆ ಡಿಜಿಟಲ್ ಸ್ಪರ್ಶ: ಆ್ಯಪ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಗದ್ದಲದ ಮೂಲವೇನು?
ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಸಲು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ ಪ್ರಧಾನಿ ಭಾಷಣದ ವೇಳೆ ನಡೆದ ಈ ಹೈಡ್ರಾಮಾವು ಸದನದ ಕಲಾಪಗಳನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ. ಪ್ರತಿಪಕ್ಷಗಳು ಇದು ತಮ್ಮ ಸಾಂವಿಧಾನಿಕ ಹಕ್ಕು ಎಂದು ವಾದಿಸುತ್ತಿದ್ದರೆ, ಬಿಜೆಪಿ ಇದನ್ನು “ಸಂಸದೀಯ ಅಸಭ್ಯ ವರ್ತನೆ” ಎಂದು ಕರೆದಿದೆ.
