BENGALURU Chicken, Egg Price Hike: ನಾನ್ವೆಜ್ ಪ್ರಿಯರಿಗೆ ಶಾಕ್-ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಚಿಕನ್ ಮತ್ತು ಮೊಟ್ಟೆ ದರದಲ್ಲಿ ಭಾರೀ ಏರಿಕೆಯಾಗಿದೆ. ಚಿಕನ್ ಕೆಜಿಗೆ 360 ರೂಪಾಯಿ ಹಾಗೂ ಒಂದು ಮೊಟ್ಟೆ 9 ರೂಪಾಯಿಗೆ ತಲುಪಿದ್ದು, ದರ ಏರಿಕೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಮುಖ್ಯಾಂಶಗಳು:-
ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ
ಚಿಕನ್ ಕೆಜಿ ಬೆಲೆ 360 ರೂ.ಗೆ ಏರಿಕೆ
ಒಂದು ಮೊಟ್ಟೆ ದರ 9 ರೂ.ಗೆ ಹೆಚ್ಚಳ
ನಾನ್ವೆಜ್ ಆಹಾರಗಳ ಬೆಲೆ ಏರಿಕೆ ಸಾಧ್ಯತೆ
ಚಿಕನ್ ಖರೀದಿಸುವವರ ಸಂಖ್ಯೆ ಇಳಿಕೆ
ಬೆಂಗಳೂರು, ಜುಲೈ 14: ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ದರ ಇದೀಗ ದಾಖಲೆಯ ಮಟ್ಟ ತಲುಪಿದ್ದು, ಬೆಂಗಳೂರಿನಲ್ಲಿ1 ಕೆಜಿ ಬಾಯ್ಲರ್ ಚಿಕನ್ ಬೆಲೆ 360 ರೂಪಾಯಿಗೆ ಹಾಗೂ 1 ಮೊಟ್ಟೆಯ ಚಿಲ್ಲರೆ ದರ 9 ರೂಪಾಯಿಗೆ ಏರಿಕೆಯಾಗಿದೆ.
ಮಾರುಕಟ್ಟೆಯ ಮಾಹಿತಿ ಪ್ರಕಾರ, ಚರ್ಮವಿಲ್ಲದ (Without Skin Chicken) ಬಾಯ್ಲರ್ ಚಿಕನ್ ಪ್ರತಿ ಕೆಜಿಗೆ 360 ರೂಪಾಯಿ ಹಾಗೂ ಚರ್ಮ ಸಮೇತ (With Skin Chicken) ಚಿಕನ್ ಪ್ರತಿ ಕೆಜಿಗೆ 340 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ 300 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಈಗ 350ರಿಂದ 360 ರೂಪಾಯಿವರೆಗೆ ಏರಿಕೆಯಾಗಿದೆ.
ಮೊಟ್ಟೆ ದರವೂ ಕೂಡ ಇದೇ ರೀತಿ ಏರಿಕೆ ಕಂಡಿದ್ದು, ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 8 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 8.30 ರಿಂದ 9 ರೂಪಾಯಿವರೆಗೆ ಮಾರಾಟವಾಗುತ್ತಿದೆ. 3 ದಿನಗಳ ಹಿಂದಷ್ಟೇ 7ರಿಂದ 7.50 ರೂಪಾಯಿ ಇದ್ದ ಮೊಟ್ಟೆ ಬೆಲೆ ಈಗ 9 ರೂಪಾಯಿಗೆ ತಲುಪಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ.
ಚಿಕನ್ ಬೆಲೆ ಏರಿಕೆಯಿಂದಾಗಿ ಚಿಕನ್ ಬಿರಿಯಾನಿ, ಮೊಟ್ಟೆಯಿಂದ ಮಾಡುವ ಕರಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಚಿಕನ್ ಮತ್ತು ಮೊಟ್ಟೆ ದರ ಏರಿಕೆಯಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೂ ಹೊರೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಚಿಕನ್ ಬಿರಿಯಾನಿ, ಮೊಟ್ಟೆ ಕರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
