ರಾಜ್ಯ ಸಚಿವ ಸಂಪುಟ ಸರ್ಜರಿಗೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದರು.
ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ನಡೆದ ಸಭೆಯ ಮಧ್ಯೆಯೇ ಖರ್ಗೆ ತುರ್ತುವಾಗಿ ಬೆಂಗಳೂರಿಗೆ ಮರಳಿದ್ದರು. ಅದರ ಬೆನ್ನಲ್ಲೇ ನಡೆದ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ಸಚಿವ ಸಂಪುಟಕ್ಕೆ ಪರಿಗಣಿಸಲಾಗಿರುವ 11 ಮಂದಿ ಹಿರಿಯ ಮಾಜಿ ಸಚಿವರ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಖರ್ಗೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ. ಪಟ್ಟಿಯಲ್ಲಿರುವ ಕೆಲವರ ಹೆಸರನ್ನು ಕೈಬಿಡುವ ಹಾಗೂ ಉಳಿದ 32 ಆಕಾಂಕ್ಷಿಗಳಲ್ಲಿ ಯಾರಿಗೆ ಆದ್ಯತೆ ನೀಡಬೇಕು ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಂದ ಸಿದ್ಧಪಡಿಸಲಾದ ಪಟ್ಟಿಯಲ್ಲಿ 11 ಮಂದಿ ಹಿರಿಯ ಮಾಜಿ ಸಚಿವರ ಹೆಸರಿದ್ದು, ಅದರಲ್ಲಿ ಶೇಕಡಾ 50ರಷ್ಟು ಹೆಸರನ್ನು ಕೈಬಿಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಯಾವ ನಾಯಕರನ್ನು ಪಟ್ಟಿಯಿಂದ ಕೈಬಿಡಬೇಕು ಎಂಬ ಅಂತಿಮ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈಗೊಳ್ಳಲಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆಯ ಬಳಿಕ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ. ಇದೇ ವೇಳೆ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಲಾಬಿಯೂ ಜೋರಾಗಿದೆ. ಇತ್ತ ಶಾಸಕ ಅಜಯ್ ಸಿಂಗ್ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮನ್ನು ಸಚಿವ ಸಂಪುಟಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಶಾಸಕ ಎಂ. ಕೃಷ್ಣಪ್ಪ ಕೂಡ ಖರ್ಗೆ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಕೋರಿದ್ದಾರೆ.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಸಮಾಲೋಚನೆಗಳು ಮುಂದುವರಿದಿದ್ದು, ಅಂತಿಮ ಪಟ್ಟಿಯ ಘೋಷಣೆಯತ್ತ ಕಾಂಗ್ರೆಸ್ ನಾಯಕತ್ವದ ಚಿತ್ತ ನೆಟ್ಟಿದೆ.
