ಬೆಂಗಳೂರು, ಜು.18: ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಚಿತ್ರತಂಡ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಪ್ರಭಾಸ್ ನಟನೆಯ, ಜಗತ್ತಿನಾದ್ಯಂತ ಭಾರಿ ಕುತೂಹಲ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಫೌಜಿ’ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ‘ಸೀತಾರಾಮಂ’ ಖ್ಯಾತಿಯ ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಆಕರ್ಷಕ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್ ಘೋಷಿಸಲಾಗಿದೆ.
ಕೈಯಲ್ಲಿ ಕತ್ತಿ ಹಿಡಿದು, ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದೇ ಡಿಸೆಂಬರ್ 3ರಂದು ‘ಫೌಜಿ’ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ದರ್ಶನ ಕೊಡಲಿದ್ದಾನೆ. ಈ ಬಿಗ್ ಬಜೆಟ್ ಚಿತ್ರವನ್ನು ಟಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ನ ನವೀನ್ ಯರ್ನೇನಿ ಮತ್ತು
ವೈ. ರವಿ ಶಂಕರ್ ಅವರು, ಟಿ-ಸೀರೀಸ್ ಫಿಲ್ಮ್ಸ್ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಪ್ರಭಾಸ್ ಅವರಿಗೆ ಜೋಡಿಯಾಗಿ ಹೊಸ ಆಕರ್ಷಣೆ ಇಮಾನ್ವಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರಾದ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದ ಮತ್ತು ರಾಹುಲ್ ರವಿಂದ್ರನ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಚಿತ್ರದ ಬೆಂಕಿ ತರಹದ ಕಥೆಗೆ ಅಷ್ಟೇ ಬಲಿಷ್ಠವಾದ ತಾಂತ್ರಿಕ ತಂಡ ಸಾಥ್ ನೀಡಿದೆ. ಸುದೀಪ್ ಚಟರ್ಜಿ ಅವರ ಅದ್ಭುತ ಛಾಯಾಗ್ರಹಣ ಹಾಗೂ ವಿಶಾಲ್ ಚಂದ್ರಶೇಖರ್ ಅವರ ಹಿತವಾದ ಸಂಗೀತ ಈ ಚಿತ್ರಕ್ಕಿದೆ. ಇನ್ನುಳಿದಂತೆ ಅನಿಲ್ ವಿಲಾಸ್ ಜಾಧವ್ ಅವರ ನಿರ್ಮಾಣ ವಿನ್ಯಾಸ ಹಾಗೂ ಕೋಟಗಿರಿ ವೆಂಕಟೇಶ್ವರ ರಾವ್ ಅವರ ಚುರುಕಾದ ಸಂಕಲನ ಈ ಚಿತ್ರಕ್ಕಿದ್ದು, ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿಬರಲಿದೆ ಎಂಬ ಭರವಸೆ ಮೂಡಿಸಿದೆ. ಪ್ರಭಾಸ್ ರಗಡ್ ಲುಕ್ನಲ್ಲಿ ಅಬ್ಬರಿಸಲಿರುವ ‘ಫೌಜಿ’ ಈ ವರ್ಷದ ಕೊನೆಯಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಸಜ್ಜಾಗಿದ್ದಾನೆ.
