DHARMENDRA PRADHAN RESIGN: ನೀಟ್-ಯುಜಿ 2026 ಪರೀಕ್ಷೆಗೆ ಸಂಬಂಧಿಸಿದಂತೆ ನೈತಿಕ ಹೊಣೆಯನ್ನು ಮೊದಲ ದಿನದಿಂದಲೇ ತಾವು ಹೊತ್ತಿದ್ದು, ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿಯಲಿಲ್ಲ’ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜೀನಾಮೆ ಸಲ್ಲಸಿದ್ದೇನೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನವದೆಹಲಿ, ಜು.25: ನೀಟ್ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನೀಟ್-ಯುಜಿ 2026 ಪರೀಕ್ಷೆ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. ದೇಶದ ಯುವಜನತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರಕಟಿಸಿರುವ ಎರಡು ಪುಟಗಳ ಪತ್ರದಲ್ಲಿ ದೇಶದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ಧರ್ಮೇಂದ್ರ ಪ್ರಧಾನ್, ‘ನೀಟ್-ಯುಜಿ 2026 ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಗಳ ನೈತಿಕ ಹೊಣೆಯನ್ನು ಮೊದಲ ದಿನದಿಂದಲೇ ತಾವು ಹೊತ್ತಿದ್ದು, ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿಯಲಿಲ್ಲ’ ಎಂದು ಹೇಳಿದ್ದಾರೆ.
ಮೇ 3, 2026ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿತ್ತು. ಜೊತೆಗೆ ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾವುದೇ ಅಡಚಣೆಯಿಲ್ಲದೆ ಪರೀಕ್ಷೆ ಬರೆಯುವಂತೆ ಮಾಡುವುದೇ ಸರ್ಕಾರದ ಪ್ರಮುಖ ಆದ್ಯತೆಯಾಗಿತ್ತು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾ ಆಡಳಿತ, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರದಿಂದ ಜೂನ್ 21ರಂದು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಪ್ರಧಾನ್ ತಿಳಿಸಿದ್ದಾರೆ.
ಜುಲೈ 16ರಂದು ಪ್ರಕಟವಾದ ಫಲಿತಾಂಶದಲ್ಲಿ ಬಡ ಹಿನ್ನೆಲೆಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಯಶಸ್ಸು ದೊರೆತಿದೆ. ಆದರೆ ಈ ಅವಧಿಯಲ್ಲಿ ಜವಾಬ್ದಾರಿಯುತ ಹುದ್ದೆಗಳಲ್ಲಿ ಕುಳಿತಿದ್ದ ಕೆಲವರು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ಅದು ತಮ್ಮ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಳೆದ 10 ದಿನಗಳ ಬೆಳವಣಿಗೆಗಳು ತಮ್ಮನ್ನು ಅತ್ಯಂತ ದುಃಖಿತಗೊಳಿಸಿವೆ. ಇದು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ, ಭಾರತದ ಯುವಶಕ್ತಿಯ ಭವಿಷ್ಯದ ಪ್ರಶ್ನೆಯಾಗಿದೆ. ಆ ಕಾರಣದಿಂದ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪ್ರಧಾನ್ ತಿಳಿಸಿದ್ದಾರೆ.
