ಹಾವೇರಿ, ಜು.28: ಹಾನಗಲ್ ತಾಲೂಕಿನ ನೀರಾವರಿ ಯೋಜನೆಗಳ ಸಮರ್ಪಕ ಕಾರ್ಯನಿರ್ವಹಣೆಗೆ ಆಗ್ರಹಿಸಿ ರಸ್ತೆ ತಡೆದು ರೈತ ಸಂಘ, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನ್ ಗೌಡ ಪಾಟೀಲ್, ರೈತ ಸಂಘ, ಬಿಜೆಪಿ ಮುಖಂಡರು ಹಾನಗಲ್ ತಾಲೂಕಿನ ಆಡೂರು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಾನಗಲ್ ತಾಲೂಕಿನ ನೀರಾವರಿ ಯೋಜನೆಗಳಾದ ಬಸಾಪೂರ ಮ ಆಡೂರ ಏತ ನೀರಾವರಿ, ಬಾಳಂಬೀಡ ಏತ ನೀರಾವರಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ಮಾವು ಮತ್ತು ಅಡಿಕೆಗೆ ಸಮಪರ್ಕವಾಗಿ ಬೆಳೆವಿಮೆಯನ್ನು
ಕೊಟ್ಟಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ತಾವರಗೊಪ್ಪ, ವಾಸನ, ಕಲಕೇರಿ ಮಾರ್ಗವಾಗಿ ಓಡಾಡಲು ಬಸ್ಗಳಿಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಹಾನಗಲ್ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು, ಆಡೂರು ಸುತ್ತ ಮುತ್ತಲಿನ ಹಳ್ಳಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಅಧಿಕಾರಿಗಳು ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
