ASR AIRPORT: ಆಂಧ್ರದ ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ಜಿಎಂಆರ್ ಗ್ರೂಪ್ ನಿರ್ಮಿಸಿರುವ ಅಲ್ಲೂರಿ ಸೀತಾರಾಮರಾಜು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಏರ್ಪೋರ್ಟ್ ಉದ್ಘಾಟನೆ ಜೊತೆಗೆ ಸೆಮಿಕಂಡಕ್ಟರ್ ಘಟಕ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ವಿಜಯನಗರಂ, ಆ.01: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಅಲ್ಲೂರಿ ಸೀತಾರಾಮರಾಜು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಉಪಸ್ಥಿತರಿದ್ದರು. ವಿಮಾನ ನಿಲ್ದಾಣ ನಿರ್ಮಿಸಿರುವ ‘ಜಿಎಂಆರ್ ಗ್ರೂಪ್’ ಪ್ರತಿನಿಧಿಗಳು ಪ್ರಧಾನಮಂತ್ರಿಗೆ ವಿಮಾನ ನಿಲ್ದಾಣದ ಅತ್ಯಾಧುನಿಕ ಸೌಲಭ್ಯಗಳು ಮತ್ತು ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ₹5,640 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಈ ವಿಮಾನ ನಿಲ್ದಾಣವು ವಾರ್ಷಿಕವಾಗಿ 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ವಿಮಾನ ನಿಲ್ದಾಣದ ಮೇಲ್ಛಾವಣಿಯು ಆಂಧ್ರಪ್ರದೇಶದ ಅರಾಕು ಕಣಿವೆಯ ಸಾಂಪ್ರದಾಯಿಕ ‘ಚುಟ್ಟಿಲು’ ಗುಡಿಸಲುಗಳು ಮತ್ತು ಹಾರುವ ಮೀನಿನ ಆಕಾರದಿಂದ ಕೂಡಿದೆ
ಸೆಮಿಕಂಡಕ್ಟರ್ ತಯಾರಿಕಾ ಘಟಕ
ವಿಶಾಖಪಟ್ಟಣದಲ್ಲಿ ₹460 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ASIP ಸೆಮಿಕಂಡಕ್ಟರ್ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಅಡಿಯಲ್ಲಿ ಅನುಮೋದನೆ ಪಡೆದ ಆಂಧ್ರಪ್ರದೇಶದ ಮೊದಲ ಸೆಮಿಕಂಡಕ್ಟರ್ ಘಟಕ ಇದಾಗಿದ್ದು, ವಾರ್ಷಿಕ 9.6 ಕೋಟಿ ಚಿಪ್ಗಳನ್ನು ತಯಾರಿಸುವ ಗುರಿ ಹೊಂದಿದೆ.
