AMERICA SHOCK TO INDIA: ರಷ್ಯಾ ಹಾಗೂ ಅದರ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಖರೀದಿದಾರರಾದ ಚೀನಾ ಮತ್ತು ಭಾರತದಂತಹ ದೇಶಗಳಿಗೆ ದಂಡ ವಿಧಿಸುವ ಮಸೂದೆಗೆ ಅಮೆರಿಕದ ಸೆನೆಟ್ ಅನುಮೋದನೆ ನೀಡಿದ್ದು, ಭಾರತ ಸೇರಿ 5 ದೇಶಗಳ ಮೇಲೆ ಶೇ.100ರಷ್ಟು ಸುಂಕ ಹೇರಿಕೆಯಾಗಲಿದೆ.
ವಾಷಿಂಗ್ಟನ್, ಆ.8: ರಷ್ಯಾ ಹಾಗೂ ಅದರ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಖರೀದಿದಾರರಾದ ಚೀನಾ ಮತ್ತು ಭಾರತದಂತಹ ದೇಶಗಳಿಗೆ ದಂಡ ವಿಧಿಸುವ ಮಸೂದೆಗೆ ಅಮೆರಿಕದ ಸೆನೆಟ್ ಭಾರೀ ಬಹುಮತದಿಂದ ಅನುಮೋದನೆ ನೀಡಿದೆ. ಇಂತಹ ವ್ಯಾಪಾರವು ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಲು ನೆರವಾಗುತ್ತಿದೆ ಎಂದು ಮಸೂದೆ ಪ್ರತಿಪಾದಿಸುತ್ತದೆ.
‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026’ ಎಂದು ಮರುನಾಮಕರಣ ಮಾಡಲಾಗಿರುವ ಈ ಮಸೂದೆಗೆ ಸೆನೆಟ್ನಲ್ಲಿ 86-11 ಮತಗಳ ಭಾರೀ ಬಹುಮತ ದೊರೆತಿದೆ. ರಷ್ಯಾದ ತೈಲ ಮತ್ತು ಅನಿಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಿಶ್ವದ ಐದು ಪ್ರಮುಖ ದೇಶಗಳಿಂದ ಬರುವ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದು ಅವಕಾಶ ನೀಡುತ್ತದೆ.
ಸದ್ಯ ಚೀನಾ, ಭಾರತ, ಅಜರ್ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಪ್ರಮುಖ ಐದು ದೇಶಗಳಾಗಿವೆ.
ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಸುಂಕ
ದ್ವಿಪಕ್ಷೀಯ ಬೆಂಬಲ ಹೊಂದಿರುವ ಈ ಮಸೂದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ವಿಶ್ವದ ಐದು ಪ್ರಮುಖ ದೇಶಗಳ ಮೇಲೆ ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ. ಈ ಪಟ್ಟಿಯಲ್ಲಿ ಚೀನಾ ಮತ್ತು ಭಾರತವೂ ಸೇರಿವೆ.
ತಮ್ಮ ನೈಸರ್ಗಿಕ ಅನಿಲದ ಶೇಕಡ 15ಕ್ಕಿಂತ ಕಡಿಮೆ ಪ್ರಮಾಣವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವ ಮತ್ತು ಆ ಆಮದುಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತಿರುವ ದೇಶಗಳಿಗೆ ವಿನಾಯಿತಿ ನೀಡಲಾಗಿದೆ.
