Sugar Price Hike: ಹಬ್ಬದ ಹೊತ್ತಲ್ಲೇ ದಿಢೀರ್ ಸಕ್ಕರೆ ದರ ಏರಿಕೆ ಕಂಡಿದ್ದು, ಗ್ರಾಹಕರಿಗೆ ಸಕ್ಕರೆ ಕಹಿಯಾಗಿ ಪರಿಣಮಿಸಿದೆ. 3 ದಿನದಲ್ಲಿ ಸಕ್ಕರೆ ಬೆಲೆ ಬರೋಬ್ಬರಿ 15ರೂ ಏರಿಕೆ ಕಂಡಿದೆ. ಇದರಿಂದ ಸಣ್ಣ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ.

ಕೊಪ್ಪಳ, ಆ.22: ಪ್ರತಿದಿನ ಅಡುಗೆ ಬೇಕಾಗಿರುವ ಪದಾರ್ಥ ಎಂದರೆ ಸಕ್ಕರೆ. ಆದರೆ ಸಿಹಿಯಾಗಿದ್ದ ಸಕ್ಕರೆ ಇದೀಗ ಗ್ರಾಹಕರಿಗೆ ಕಹಿ ಆಗುತ್ತಿದೆ. ಏಕೆಂದರೆ ಸಕ್ಕರೆ ದರದಲ್ಲಿ ಏಕಾಏಕಿ ಭಾರಿ ಏರಿಕೆಯಾಗಿದ್ದು , ಕೆಜಿ ಸಕ್ಕರೆ ಬರೋಬ್ಬರಿ 70 ರೂ.ಗೆ ತಲುಪಿದೆ. 3 ದಿನಗಳ ಹಿಂದಷ್ಟೇ 55 ರೂಪಾಯಿಗೆ ಮಾರಾಟವಾಗುತ್ತಿದ್ದ ಸಕ್ಕರೆ, ಇದೀಗ 68ರಿಂದ 70 ರೂ.ಗೆ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಆತಂಕವು ವ್ಯಕ್ತವಾಗಿದೆ.
ಕೇವಲ ಚಿಲ್ಲರೆ ಅಂಗಡಿಗಳಲ್ಲಿ ಮಾತ್ರವಲ್ಲದೆ ಸಗಟು (ಹೋಲ್ಸೇಲ್) ಮಾರುಕಟ್ಟೆಯಲ್ಲೂ ಸಕ್ಕರೆ ಬೆಲೆ ತೀವ್ರ ಏರಿಕೆ ಕಂಡಿದೆ. ಕೊಪ್ಪಳ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ 15 ದಿನಗಳ ಹಿಂದೆ ಕ್ವಿಂಟಲ್ಗೆ 4,500 ರೂಪಾಯಿ ಇದ್ದ ದರ, ಇದೀಗ 6,000 ದಿಂದ 6,500 ರೂಪಾಯಿಗೆ ಜಿಗಿದಿದೆ.
ದಿಢೀರ್ ಬೆಲೆ ಏರಿಕೆಗೆ ಇದು ಕಾರಣ

ಸಕ್ಕರೆ ದರ ಏಕಾಏಕಿ ಹೆಚ್ಚಳವಾಗಲು ಉತ್ಪಾದನೆ ಕಡಿಮೆಯಾಗಿರುವುದು. ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಕಬ್ಬು ಬೆಳೆಗೆ ಹಾನಿಯಾಗಿದ್ದು, ಉತ್ಪಾದನೆ ನಿರೀಕ್ಷೆಗಿಂತ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಸಕ್ಕರೆ ಪೂರೈಕೆ ಬಿಗಿಯಾಗಬಹುದು ಎಂಬ ನಿರೀಕ್ಷೆ ಬೆಲೆ ಏರಿಕೆಗೆ ಕಾರಣವಾಗಿದೆ.
ವರಮಹಾಲಕ್ಷ್ಮಿ ಆಚರಣೆ ವೇಳೆ ಸಕ್ಕರೆ ದರ ಹೆಚ್ಚಾಗಿದ್ದು, ಮುಂದೆ ಬರುವ ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಸೀಸನ್ಗೆ ಸಕ್ಕರೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಳದ ನಡುವೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟಾಕ್ ಕಡಿಮೆಯಾಗಿರುವುದು ಕೂಡ ಬೆಲೆ ಏರಿಕೆಗೆ ಮತ್ತಷ್ಟು ಒತ್ತಡ ತಂದಿದೆ.
ಚಹಾ ದರ ಏರಿಕೆ?![]()
ಚಹಾ, ಕಾಫಿಯಿಂದ ಹಿಡಿದು ಸಿಹಿ ತಿಂಡಿ, ಬೇಕರಿ ಉತ್ಪನ್ನಗಳವರೆಗೆ ಸಕ್ಕರೆ ಬಳಕೆಯಾಗುತ್ತದೆ. ಹೀಗಾಗಿ ಸಕ್ಕರೆ ದರ ಏರಿಕೆಯ ಪರಿಣಾಮ ಗ್ರಾಹಕರ ಮೇಲೆ ಮಾತ್ರವಲ್ಲದೆ ಸಣ್ಣಪುಟ್ಟ ಹೋಟೆಲ್, ಬೇಕರಿ ಮತ್ತು ಸಿಹಿ ತಿಂಡಿ ವ್ಯಾಪಾರಿಗಳ ಮೇಲೂ ಬೀಳುವ ಸಾಧ್ಯತೆಯಿದೆ. ಈಗಾಗಲೇ ಕೆ.ಜಿಗೆ 70 ರೂ ತಲುಪಿರುವ ಸಕ್ಕರೆ ದರ ಮುಂದೆ 80, 90 ಶತಕ ಬಾರಿಸಿದರೂ ಅಚ್ಚರಿ ಇಲ್ಲ.
