karnataka appeals to cwma to modify order requests: ತಮಿಳುನಾಡಿಗೆ ದಿನಕ್ಕೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿದ್ದ ಆದೇಶವನ್ನು 3 ಸಾವಿರ ಕ್ಯೂಸೆಕ್ಗೆ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದೆ. ಕಾವೇರಿ ಕೊಳ್ಳದ 4 ಡ್ಯಾಮ್ಗಳ ಒಳ ಹರಿವಿನಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಹಿನ್ನೆಲೆ ಹೆಚ್ಚುವರಿ ಹೊರಹರಿವು ಸಾಧ್ಯವಿಲ್ಲ ಎಂದು ಸಿಡಬ್ಲ್ಯಎಂಎಗೆ ಕರ್ನಾಟಕ ತಿಳಿಸಿದೆ.
ಬೆಂಗಳೂರು, ಸೆ. 16: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಮಾರ್ಪಾಡಿಗೆ ಆಗ್ರಹಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಮೇಲ್ಮನವಿ ಸಲ್ಲಿಸಿದೆ. ಸೆ.15ರ ವೇಳೆಗೆ ಕಾವೇರಿ ಕೊಳ್ಳದ 4 ಡ್ಯಾಮ್ಗಳಲ್ಲಿ 55.389 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. 4 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇಕಡಾ 52.97 ಮಾತ್ರ ನೀರಿದೆ. ಹೀಗಾಗಿ 6000 ಕ್ಯೂಸೆಕ್ ಬದಲು 3000 ಕ್ಯೂಸೆಕ್ಗೆ ನೀರಿನ ಪ್ರಮಾಣ ಇಳಿಕೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಹಿಂದೆ ಆದೇಶಿಸಿತ್ತು.
ಜೂ.1ರಿಂದ ಸೆ.15ರವರೆಗೆ 4 ಡ್ಯಾಮ್ಗಳಿಗೆ ಒಳಹರಿವು 111 ಟಿಎಂಸಿ ಮಾತ್ರ ಇದ್ದು, ಇದೇ ಅವಧಿಯ 30 ವರ್ಷಗಳ ಸರಾಸರಿ ಒಳಹರಿವು 228.108 ಟಿಎಂಸಿಯಾಗಿದೆ. ಈ ವರ್ಷ ಶೇಕಡಾ 51ಕ್ಕೂ ಹೆಚ್ಚು ಒಳಹರಿವು ಕೊರತೆಯಿದೆ. ಆ.27ರಂದು 26,930 ಕ್ಯೂಸೆಕ್ ಇದ್ದ 4 ಡ್ಯಾಮ್ಗಳ ಒಳಹರಿವು ಸೆ.8ರಂದು 3,887 ಕ್ಯೂಸೆಕ್ಗೆ ಕುಸಿದಿದೆ. ಸುಮಾರು 15 ದಿನಗಳಲ್ಲಿ ಶೇಕಡಾ 85.57ರಷ್ಟು ಇಳಿಕೆ ಕಂಡುಬಂದಿದೆ. ಸೆ.15ರ ವೇಳೆ ಒಳಹರಿವು ಸುಮಾರು 3 ಸಾವಿರ ಕ್ಯೂಸೆಕ್ಗೆ ಇಳಿದಿದ್ದು, ಈ ಹಿನ್ನೆಲೆ ಹೆಚ್ಚುವರಿ ಹೊರಹರಿವು ಸಾಧ್ಯವಿಲ್ಲ ಎಂದು ಸಿಡಬ್ಲ್ಯಎಂಎಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಕರ್ನಾಟಕ ಸರ್ಕಾರ ಉಲ್ಲೇಖಿಸಿದೆ.
ಒಳಹರಿವಿನ ಕುಸಿತಕ್ಕೆ ಸೆಪ್ಟೆಂಬರ್ 8ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ 142ನೇ ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಪ್ರತಿನಿಧಿ ನೀಡಿದ ಹೇಳಿಕೆಯೂ ಪೂರಕವಾಗಿದೆ. ಸೆಪ್ಟೆಂಬರ್ 8ರಿಂದ 18ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಪ್ರಮುಖ ಮಳೆಯ ಅವಧಿ ಇರುವ ಸಾಧ್ಯತೆ ಇಲ್ಲ. ಈ ಅವಧಿಯಲ್ಲಿ ನದಿಯ ಜಲಾನಯನ ಪ್ರದೇಶದಲ್ಲಿ ಒಟ್ಟಾರೆ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದ್ದು, ಈ ಪರಿಸ್ಥಿತಿ 2026ರ ಅಕ್ಟೋಬರ್ ಮಧ್ಯಭಾಗದವರೆಗೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದರು. ಇಷ್ಟಾದರೂ, ಪ್ರಸಕ್ತ ಜಲ ವರ್ಷದಲ್ಲಿ ಕರ್ನಾಟಕವು ನೀಡಲಾದ ಪ್ರತಿಯೊಂದು ನಿರ್ದೇಶನವನ್ನೂ ವಾಸ್ತವವಾಗಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರೀತಿಯಲ್ಲಿ ಪಾಲಿಸಿದೆ ಎಂದು ವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಮನವರಿಕೆ ಮಾಡಿದೆ.
