SATISH JARKIHOLI ED CASE TRANSFER TO DELHI ED: ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಇಡಿ ತನಿಖೆಯನ್ನು ದೆಹಲಿ ಘಟಕಕ್ಕೆ ವರ್ಗಾಯಿಸಲು ಸಿದ್ಧತೆ ನಡೆದಿದ್ದು, ಲೋಕೋಪಯೋಗಿ ಕಾಮಗಾರಿಗಳ ಅಕ್ರಮ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಆರೋಪದಡಿ ತನಿಖೆ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಗೋಚರಿಸಿವೆ. ಮತ್ತೊಂದೆಡೆ ದಾಳಿ ವೇಳೆ ಇಡಿ ಅಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಬಲವಾದ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿರುವ ಕಾರಣ ಪ್ರಕರಣ ಮಹತ್ವ ಪಡೆದುಕೊಂಡಿದೆ.

ಬೆಂಗಳೂರು, ಸೆ. 25: ಜಾರಿ ನಿರ್ದೇಶನಾಲಯ (ED) ದಾಳಿ ಪ್ರಕರಣ ಸಂಬಂಧ ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಪ್ರಕರಣವನ್ನ ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಮಾಡಲು ಸಿದ್ದತೆ ನಡೆದಿದ್ದು, ಬೆಂಗಳೂರು ಅಧಿಕಾರಿಗಳ ಬದಲು ದೆಹಲಿ ಅಧಿಕಾರಿಗಳಿಂದ ತನಿಖೆ ನಡೆಯಲಿದೆ. ದಾಳಿ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಪರಿಶೀಲನೆಯನ್ನು ದೆಹಲಿ ಅಧಿಕಾರಿಗಳು ನಡೆಸಿದ್ದು, ವಿದೇಶಿ ಬಂಡವಾಳ ಮತ್ತು ಮನಿ ಲ್ಯಾಂಡರಿಂಗ್ ವಿಚಾರವಾಗಿ ತನಿಖೆ ನಡೆಯಲಿದೆ.
ದಾಳಿ ವೇಳೆ ಮಹತ್ವದ ದಾಖಲೆ ಲಭ್ಯ?
ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಇಡಿ ಅಧಿಕಾರಿಗಳಿಗೆ ಬಲವಾದ ಸಾಕ್ಷ್ಯಗಳು ಸಿಕ್ಕಿರುವ ಮಾಹಿತಿ. ಸಂಬಂಧಿಕರು, ಸಹಚರರ ಬಳಿಯೂ ಸಾಕ್ಷ್ಯ ಪತ್ತೆಯಾಗಿದೆ. ಕೇಂದ್ರದಿಂದ ಬಂದಂತ ಅನುದಾನದಲ್ಲಿ ಕ್ಯಾಪಿಟಲ್ ಅಸೋಸಿಯಟ್ಸ್ ಸ್ಕೀಮ್ ಅಡಿ ನಡೆದಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಷ್ಟಚಾರ ಪತ್ತೆಯಾಗಿದೆ. ರಸ್ತೆ ಕಾಮಗಾರಿಗಳ ಗುತ್ತಿಗೆಯಲ್ಲಿ ಭಾರಿ ಅಕ್ರಮ ನಡೆದಿರುವ ಸಂಬಂಧ ಆಧಾರಗಳು ಸಿಕ್ಕಿವೆ ಎನ್ನಲಾಗಿದೆ.
