SIR complaint against CM DKS: ಚುನಾವಣಾ ಆಯೋಗದ ಕಚೇರಿ (SIR) ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ನಡೆಸಿದ ಧರಣಿ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ (JDS) ಮುಖಂಡರು ಮುಗಿಬಿದ್ದಿದ್ದಾರೆ. ಯಾವುದೇ ಅನುಮತಿ ಇಲ್ಲದೇ ರಾಜ್ಯ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿದ್ದನ್ನು ಖಂಡಿಸಿ ಬಿಜೆಪಿ ದೂರು ದಾಖಲಿಸಿದೆ.
ಬೆಂಗಳೂರು, ಅ.2: ಕರ್ನಾಟಕದಲ್ಲಿ ಎಸ್ಐಆರ್ ಫಾರ್ಮ್ 7 ವಿಚಾರವಾಗಿ ಡಿಕೆ ಶಿವಕುಮಾರ್ ಸರ್ಕಾರ ಆಕ್ರೋಶಗೊಂಡಿದ್ದು, ಫಾರ್ಮ್ 7 ದುರುಪಯೋಗ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ.ಕೆ.ಶಿವಕುಮಾರ್ ಆದಿಯಾಗಿ ಸಚಿವರು ರಾಜ್ಯ ಚುನಾವಣಾ ಆಯೋಗ ಮುಂದೆ ಧರಣಿ ನಡೆಸಿದ್ದರು. ಇದಕ್ಕೆ ವಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರು ವಿರುದ್ಧ ಕ್ರಮಕೈಗಳ್ಳಬೇಕೆಂದು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಪೊಲೀಸ್ ಕಮಿಷನರ್ಗೆ ದೂರು ನೀಡಿದೆ.
ಸಾಂವಿಧಾನಿಕ ಸಂಸ್ಥೆ ಮುಂದೆ ಸರ್ಕಾರವೇ ಪ್ರತಿಭಟನೆ ಮಾಡಿದೆ. ಇದು ಕಾನೂನು ಬಾಹಿರ, ದೂರು ದಾಖಲಿಸಬೇಕು ಅಂತ ಆಗ್ರಹಿಸಿದ ಬಿಜೆಪಿ ನಾಯಕರು ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು. ಬಳಿಕ ಒಟ್ಟಾಗಿ ಕಮಿಷನರ್ಗೆ ದೂರು ಸಲ್ಲಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಸಿಎಂ ಹಾಗೂ ಸಚಿವರು ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜಕೀಯ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. ದೂರಿನಲ್ಲಿ 6 ಪ್ರಮುಖ ಆಕ್ಷೇಪಗಳನ್ನು ಮುಂದಿಟ್ಟಿದೆ.
ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠವು ಆದೇಶ ಮಾಡಿ ಫ್ರೀಡಂ ಪಾರ್ಕ್ ಹೊರತಾಗಿ ಬೇರೆ ಕಡೆ ಪ್ರತಿಭಟನೆ ನಡೆಸಲು ನಿರ್ಬಂಧ ಹೇರಿದೆ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅಗೌರವವನ್ನು ತೋರಿಸಿ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳು ಚುನಾವಣಾ ಕಚೇರಿ ಆವರಣದಲ್ಲಿ ಯಾವುದೇ ಅನುಮತಿ ಇಲ್ಲದೆ ಧರಣಿ, ಪ್ರತಿಭಟನೆಯನ್ನು ನಡೆಸಿರುವುದು ನ್ಯಾಯಾಲಯ ಆದೇಶದ ಉಲ್ಲಂಘನೆ ಆಗಿರುತ್ತದೆ.
ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲ. ಅದು ಸಂವಿಧಾನಾತ್ಮಕವಾಗಿ ಸ್ವತಂತ್ರವಾದ ಚುನಾವಣಾ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಇಂತಹ ಸಂಸ್ಥೆಯ ಕಚೇರಿ ಆವರಣವನ್ನೇ ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲು ಅವಕಾಶ ನೀಡಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಹಾಗೂ ಸಾರ್ವಜನಿಕರ ವಿಶ್ವಾಸದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
