Bhaskarrao: ಯೂಟ್ಯೂಬರ್ ಧ್ರುವ್ ರಾಠಿ ಅವರ ಪೌರತ್ವ, ಇಮಿಗ್ರೇಷನ್ ಸ್ಥಾನಮಾನ ಮತ್ತು ವೀಸಾ ಷರತ್ತುಗಳ ಪಾಲನೆಯನ್ನು ಪರಿಶೀಲಿಸುವಂತೆ ಕೋರಿ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಬೆಂಗಳೂರು, ಅ.9: ಅ.8ರಂದು ನಡೆದ ‘ಎಸ್ಐಆರ್’ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ, ಯೂಟ್ಯೂಬರ್ ಧ್ರುವ್ ರಾಠಿ ಅವರ ಪೌರತ್ವ, ಇಮಿಗ್ರೇಷನ್ ಸ್ಥಾನಮಾನ ಮತ್ತು ವೀಸಾ ಷರತ್ತುಗಳ ಪಾಲನೆಯನ್ನು ಪರಿಶೀಲಿಸುವಂತೆ ಕೋರಿ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಜರ್ಮನ್ ಪೌರತ್ವವನ್ನು ಹೊಂದಿದ್ದಾರೆ ಎಂದು ಭಾವಿಸಲಾದ ರಾಠಿ ಅವರು, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ನಟ ಪ್ರಕಾಶ್ ರಾಜ್ ಮತ್ತು ಇತರರೊಂದಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಮತ್ತು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಕುರಿತು ಭಾರತೀಯ ಚುನಾವಣಾ ಆಯೋಗವನ್ನು ಟೀಕಿಸಿದ್ದರು ಎಂದು ರಾವ್ ತಿಳಿಸಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ರಾವ್, ಪತ್ರವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ವೀಸಾ, ಇಮಿಗ್ರೇಷನ್ ಅನುಮತಿ ಅಥವಾ ಇತರ ಸ್ಥಾನಮಾನದ ಆಧಾರದ ಮೇಲೆ ಭಾರತದಲ್ಲಿರುವ ವಿದೇಶಿ ಪ್ರಜೆಯೊಬ್ಬರು, ಭಾರತದ ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಘಟಿತ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಲು, ಅದನ್ನು ಉದ್ದೇಶಿಸಿ ಮಾತನಾಡಲು ಅಥವಾ ಅದರೊಂದಿಗೆ ಗುರುತಿಸಿಕೊಳ್ಳಲು ಕಾನೂನುಬದ್ಧವಾಗಿ ಅರ್ಹರೇ ಎಂಬುದು ಪರಿಶೀಲನೆಗೆ ಅಗತ್ಯವಿರುವ ಸೀಮಿತ ಹಾಗೂ ನಿರ್ದಿಷ್ಟ ವಿಷಯವಾಗಿದೆ’ ಎಂದು ರಾವ್ ಪತ್ರದಲ್ಲಿ ತಿಳಿಸಿದ್ದಾರೆ.
