ಮಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಮೊದಲ ಮೈಸೂರು ಕಂಬಳಕ್ಕೆ ಕ್ಷಣಗಣನೆ ಆರಂಭವಾಗಿದೆ. ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯನ್ನು ಮೈಸೂರಿನಲ್ಲಿ ಪ್ರದರ್ಶಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಕರಾವಳಿಯಿಂದ ಸುಮಾರು 170 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಣಿಯಾಗಿವೆ. ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ಸಾತಗಳ್ಳಿ, ವಿಟಿಯು ಕಾಲೇಜು ಸಮೀಪದ ಕಂಬಳ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಆರಂಭವಾಗುವಂತೆ ಅಧಿಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮಿಯಾರಿನಲ್ಲಿ ನಡೆದ ಕೋಣಗಳ ಆಯ್ಕೆ ಪ್ರಕ್ರಿಯೆ:
ಮೈಸೂರು ಕಂಬಳದಲ್ಲಿ ಭಾಗವಹಿಸುವ ಕೋಣಗಳ ಆಯ್ಕೆ ಪ್ರಕ್ರಿಯೆ ಕಾರ್ಕಳದ ಮಿಯಾರಿನಲ್ಲಿ ನಡೆದಿದೆ. ನೇಗಿಲು ಕಿರಿಯ ಹಾಗೂ ಹಗ್ಗ ಕಿರಿಯ ವಿಭಾಗಗಳ ಅರ್ಹತಾ ಸುತ್ತಿನಲ್ಲಿ ಸುಮಾರು 210 ಜೋಡಿ ಕೋಣಗಳು ಭಾಗವಹಿಸಿದ್ದವು. ಕೋಣಗಳ ವೇಗವನ್ನು ಪ್ರಮುಖ ಮಾನದಂಡವಾಗಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಈ ಮೂಲಕ ಮೈಸೂರಿನ ಕಣಕ್ಕೆ ಅರ್ಹವಾದ ಕೋಣಗಳನ್ನು ಗುರುತಿಸುವ ಪ್ರಯತ್ನ ನಡೆದಿದೆ. ಆಯ್ಕೆಗೊಂಡ ಕೋಣಗಳ ತಂಡಗಳು ಈಗಾಗಲೇ ತಮ್ಮ ಕೋಣಗಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿವೆ.ಅದರಲ್ಲಿ 85 ಜೊತೆ ಕೋಣಗಳು ಆಯ್ಕೆಯಾಗಿವೆ. ಹಿರಿಯ ವಿಭಾಗದಲ್ಲಿ 85 ಜೊತೆ ಕೋಣಗಳು, ಕಿರಿಯ ವಿಭಾಗದಲ್ಲಿ 85 ಜೊತೆ ಕೋಣಗಳು ಮೈಸೂರು ಕಂಬಳದಲ್ಲಿ ಕೂಟದಲ್ಲಿ ಭಾಗವಹಿಸಲಿದೆ. ಇವುಗಳು 13 ಸೆಕೆಂಡಿನಲ್ಲಿ ಗುರಿ ತಲುಪಿ ಈ ಹಂತಕ್ಕೆ ಆಯ್ಕೆಯಾಗಿವೆ.
ಪ್ರತಿದಿನ ಕುದಿ ಕಂಬಳ; ವೇಗ ಹೆಚ್ಚಿಸಲು ಅಭ್ಯಾಸ
ಮೈಸೂರು ಕಂಬಳದಲ್ಲಿ ಕರಾವಳಿಯ ಪ್ರಮುಖ ಓಟದ ಕೋಣಗಳು ಕಣಕ್ಕಿಳಿಯಲಿರುವುದರಿಂದ ಮಾಲೀಕರು ಸಿದ್ಧತೆಯನ್ನು ಚುರುಕುಗೊಳಿಸಿದ್ದಾರೆ. ಕೋಣಗಳಿಗೆ ಪ್ರತಿದಿನ ತರಬೇತಿಯ ಕುದಿ ಕಂಬಳ ನಡೆಸಲಾಗುತ್ತಿದ್ದು, ಅವುಗಳ ಓಟದ ವೇಗ ಹಾಗೂ ಸ್ಪರ್ಧಾ ಸಾಮರ್ಥ್ಯ ಹೆಚ್ಚಿಸಲು ಅಭ್ಯಾಸ ಮಾಡಿಸಲಾಗುತ್ತಿದೆ. ಕಂಬಳದ ಕಣದಲ್ಲಿ ಕೋಣಗಳ ವೇಗದಷ್ಟೇ ಅವುಗಳೊಂದಿಗೆ ಓಡುವ ಓಟಗಾರನ ಸಾಮರ್ಥ್ಯವೂ ಮುಖ್ಯವಾಗಿದೆ. ಹೀಗಾಗಿ ಕೋಣಗಳನ್ನು ಸ್ಪರ್ಧೆಗೆ ಸಿದ್ಧಪಡಿಸುವುದರ ಜೊತೆಗೆ ಮಾಲೀಕರು ಮತ್ತು ಓಟಗಾರರು ಕೂಡ ಸಿದ್ಧತೆ ನಡೆಸುತ್ತಿದ್ದಾರೆ. ಟಾಪ್ ರೇಸ್ನಲ್ಲಿ ಪಾಲ್ಗೊಳ್ಳುವ ಕೋಣಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ನಿರೀಕ್ಷೆಯಿದ್ದು, ಮೈಸೂರಿನಲ್ಲಿ ಕರಾವಳಿಯ ಕಂಬಳದ ವೇಗ ಮತ್ತು ರೋಚಕತೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ,
ಕೋಣಗಳ ಮಾಲೀಕರಿಗೆ ದಾಖಲೆ ಸಲ್ಲಿಸುವ ಸೂಚನೆ..?
ಮೈಸೂರು ದಸರಾ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳು ಹಾಗೂ ಕೋಣಗಳ ಯಜಮಾನರ ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಆಯೋಜಕರ ಸೂಚನೆಯಂತೆ ದಾಖಲೆಗಳನ್ನು ಸಲ್ಲಿಸುವ ಮೂಲಕ ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಅಕ್ಟೋಬರ್ 17ರಂದು ಪುತ್ತೂರಿನಿಂದ ಕೋಣಗಳ ಪ್ರಯಾಣ..?
ಅಕ್ಟೋಬರ್ 17ರಂದು ಬೆಳಗ್ಗೆ 8 ಗಂಟೆಗೆ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ಕಂಬಳ ಕೋಣಗಳನ್ನು ಹೊತ್ತ ವಾಹನಗಳು ಸಾಲಾಗಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಮಧ್ಯಾಹ್ನ 2 ಗಂಟೆಗೆ ಮಡಿಕೇರಿಯ ಕುಶಾಲನಗರದ ಸಂತೇಕಟ್ಟೆ ಮೈದಾನದಲ್ಲಿ ಊಟ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಶಾಸಕ ಮಂತರ್ ಗೌಡ ಅವರ ನೇತೃತ್ವದಲ್ಲಿ ಸುಮಾರು 3,000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಜೆ 7 ಗಂಟೆಯ ವೇಳೆಗೆ ಕೋಣಗಳ ವಾಹನಗಳು ಮೈಸೂರು ತಲುಪುವ ನಿರೀಕ್ಷೆಯಿದ್ದು, ಅವುಗಳಿಗೆ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ.