SC ST reservation war: What is the impact of the High Court order? A new weapon for political infighting…? – ಎಸ್ಸಿ ಎಸ್ಟಿ ಮೀಸಲಾತಿ ಸಮರ: ಹೈಕೋರ್ಟ್ ಆದೇಶದ ಪರಿಣಾಮ ಏನು? ರಾಜಕೀಯ ಜಿದ್ದಾಜಿದ್ದಿಗೆ ಸಿಕ್ಕ ಹೊಸ ಅಸ್ತ್ರ..?
ಎಸ್ಸಿ ಎಸ್ಟಿ ಮೀಸಲಾತಿ ಸಮರ ರಾಜ್ಯದಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 56ಕ್ಕೆ ಹೆಚ್ಚಿಸಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ. ಹೈಕೋರ್ಟ್ ಆದೇಶ ಪರಿಣಾಮ ಏನು? ಎಂಬುವುದು ಕೂಡಾ ಮಹತ್ವ ಪಡೆದುಕೊಂಡಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುವುದು ಮುಖ್ಯವಾಗಲಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಸಿಕ್ಕ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಹೈಲೈಟ್ಸ್:
- ಎಸ್ಸಿ ಎಸ್ಟಿ ಮೀಸಲಾತಿ ಸಮರ ರಾಜ್ಯದಲ್ಲಿ ತೀವ್ರಗೊಳ್ಳುವ ಸಾಧ್ಯತೆ.
- ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 56ಕ್ಕೆ ಹೆಚ್ಚಳಕ್ಕೆ ಹೈಕೋರ್ಟ್ ತಡೆ.
- ಹೈಕೋರ್ಟ್ ಆದೇಶದ ಪರಿಣಾಮ ಏನು ಹಾಗೂ ಸರ್ಕಾರದ ಮುಂದಿನ ಹೆಜ್ಜೆ ಏನು.
![]()
ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 56ಕ್ಕೆ ಹೆಚ್ಚಿಸಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ಅಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲು) ಕಾಯ್ದೆ 2022ನ್ನು ಜಾರಿಗೆ ತಂದಿತ್ತು. ಆದರೆ, ಸೋಮವಾರ ಮಹತ್ವದ ಆದೇಶ ನೀಡುವ ಮೂಲಕ ಹೈಕೋರ್ಟ್ ಮೀಸಲಾತಿ ಹೆಚ್ಚಳವನ್ನು ರದ್ದುಗೊಳಿಸಿದೆ. ನ್ಯಾಯಾಲಯದ ಆದೇಶ ಇದೀಗ ರಾಜ್ಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ.
ಆದೇಶದ ಪ್ರಮುಖ ಅಂಶ ಏನು?
ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಸಮಾಜ ಸೇವಕ ಮಹೇಂದ್ರ ಕುಮಾರ್ ಮಿತ್ರಾ ಅವರು ಈ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಪ್ರಕಟಿಸಿದೆ.
ಕಾಯಿದೆ ಅಸಂವಿಧಾನಿಕ!
ಮೀಸಲಾತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಕಾಯಿದೆಯನ್ನು ಅಸಾಂವಿಧಾನಿಕವೆಂದು ನ್ಯಾಯಪೀಠ ಸಾರಿದೆ. “ಮೀಸಲು ನೀತಿಯ ಒಟ್ಟು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸುವುದಕ್ಕೆ ರಾಜ್ಯ ಸರಕಾರ ಸಮರ್ಪಕವಾದ ಅಸಾಧಾರಣ ಪರಿಸ್ಥಿತಿ ಅಥವಾ ಸಮಕಾಲೀನ ದತ್ತಾಂಶವನ್ನು ಸಾಬೀತುಪಡಿಸಿಲ್ಲ.’ ಎಂದು ಹೇಳಿದೆ. ಇದರಿಂದಾಗಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಮಾಡಿದ್ದ ಕಾಯಿದೆ ರದ್ದಾಗಿದೆ.
ಪರಿಣಾಮ ಏನು?
ಈ ತೀರ್ಪು ಇತರೆ ನೇಮಕಾತಿಗಳ ಮೇಲೂ ಪರಿಣಾಮ ಬೀರಲಿದೆ. ಕೆಪಿಎಸ್ಸಿ ಪ್ರಕಟಿಸಿದ್ದ ಗ್ರೂಪ್ ಬಿ ಹುದ್ದೆಗಳ ನೇಮಕದಲ್ಲಿ ಬಿಬಿಎಂಪಿಯ 92 ಸಹಾಯಕ ಎಂಜಿನಿಯರ್ ಹುದ್ದೆಗಳ ಪೈಕಿ 51 ಹುದ್ದೆ ಮೀಸಲು ವರ್ಗಗಳಿಗೆ ಮತ್ತು 41 ಹುದ್ದೆಗಳನ್ನು ಸಾಮಾನ್ಯ ಅರ್ಹತಾ ವರ್ಗಕ್ಕೆ ನಿಗದಿಪಡಿಸಿತ್ತು.
ಈ ನೇಮಕ ಪ್ರಶ್ನಿಸಿ ಎಂಜಿನಿಯರಿಂಗ್ ಪದವೀಧರರು ನ್ಯಾಯಾಲಯದ ಮೊರೆ ಹೋಗಿದ್ದರು. 2025ರ ನವೆಂಬರ್ನಲ್ಲಿ ಹೈಕೋರ್ಟ್ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿತ್ತು. ನಂತರ ನಡೆಯುತ್ತಿದ್ದ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲು ಅವಕಾಶ ನೀಡಿದ್ದರೂ, ಅವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಿತ್ತು.
ಆದರೆ, ಈಗಾಗಲೇ ಪೂರ್ಣಗೊಂಡ ನೇಮಕಾತಿ ಅಥವಾ ಪ್ರವೇಶ ಪ್ರಕ್ರಿಯೆಗಳಿಗೆ ತೀರ್ಪು ಯಾವ ರೀತಿಯಲ್ಲಿ ಅನ್ವಯವಾಗಲಿದೆ ಎಂಬುದು ನಿರ್ಣಾಯಕವಾಗಿದ್ದು, ಇದು ಸರಕಾರದ ನೇಮಕಗಳ ಮೇಲೆ ಪರಿಣಾಮವನ್ನುಂಟು ಮಾಡಲಿದೆ.
ವಿಪಕ್ಷಗಳ ವಾದ ಏನು?
ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿ ಆಧಾರದ ಮೇಲೆ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿತ್ತು. ವಿಧಾನ ಮಂಡಲದ ಎರಡೂ ಸದನದಲ್ಲಿ ಕಾನೂನನ್ನು ಪಾಸ್ ಮಾಡಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ಎಸ್.ಸಿ, ಎಸ್.ಟಿ ಜನಾಂಗದ ಅಭಿವೃದ್ಧಿಯ ವಿರೋಧಿಗಳಾಗಿ ಪಿ.ಐ.ಎಲ್ ಹಾಕಲಾಗಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ಖಂಡಿತವಾಗಿಯೂ ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗಬೇಕು ಎಂದು ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಸರ್ಕಾರ ರಿಟ್ ಪಿಟಿಷನ್ ಹಾಕದಿದ್ದರೆ ನಾವು ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ನಡೆ ಏನು?
ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ರಾಜ್ಯ ಸರ್ಕಾರದ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಈ ಕುರಿತಾಗಿ ಈಗಾಗಲೇ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ಮತ್ತು ಅವಕಾಶವಂಚಿತ ಸಮುದಾಯಗಳ ಹಕ್ಕುಗಳು ಹಾಗೂ ಆಶಯಗಳನ್ನು ರಕ್ಷಿಸುವುದರ ಜೊತೆಗೆ, ಮೀಸಲಾತಿ ಹೆಚ್ಚಳವನ್ನು ಸಾಂವಿಧಾನಿಕವಾಗಿ ಸುಸ್ಥಿರವಾದ ರೀತಿಯಲ್ಲಿ ಜಾರಿಗೊಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಸಾಮಾಜಿಕ ನ್ಯಾಯವು ಕಾಯ್ದೆಯ ಘೋಷಣೆಯೊಂದಿಗೆ ಅಂತ್ಯಗೊಳ್ಳಬಾರದು. ಅದಕ್ಕೆ ಸಾಂವಿಧಾನಿಕ ರಕ್ಷಣೆ ದೊರೆಯಬೇಕು, ಸಾರ್ವಜನಿಕ ನೀತಿಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಮತ್ತು ಜನರ ಬದುಕಿನಲ್ಲಿ ನೈಜ ಅವಕಾಶಗಳ ರೂಪದಲ್ಲಿ ಕಾಣಿಸಿಕೊಳ್ಳಬೇಕು. ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಮೂಲಕ ಸುಪ್ರೀಂ ಕೋರ್ಟ್ ಕದ ತಟ್ಟಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಹೈಕೋರ್ಟ್ ಆದೇಶದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಳಿಕ ಸರ್ಕಾರ ತನ್ನ ಮುಂದಿನ ಹೆಜ್ಜೆ ಏನು ಎಂಬುವುದನ್ನು ಸ್ಪಷ್ಟಪಡಿಸಲಿದೆ.
ರಾಜಕೀಯ ಅಸ್ತ್ರ
ಮೀಸಲಾತಿ ಹೆಚ್ಚಳ ರದ್ದು ವಿಚಾರ ಇದೀಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ವೇದಿಕೆ ಆಗುವ ಸಾಧ್ಯತೆ ಇದೆ. ಚುನಾವಣೆಗೆ ಮುನ್ನ ಮೀಸಲಾತಿ ಹೆಚ್ಚಳವನ್ನು ಘೋಷಿಸುವುದಕ್ಕೆ ಅಂದಿನ ಬಿಜೆಪಿ ಸರ್ಕಾರ ಆದ್ಯತೆ ನೀಡಿತ್ತು. ಆದರೆ, ಇದಕ್ಕೆ ಸಾಂವಿಧಾನಿಕ ತಳಹದಿ ರೂಪಿಸುವಲ್ಲಿ ಆದ್ಯತೆ ನೀಡಿಲ್ಲ ಎಂಬುವುದು ಕಾಂಗ್ರೆಸ್ ವಾದವಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗಲಿದ್ದು, ಶೇ. 50ರ ಮಿತಿಯನ್ನು ಮೀರುತ್ತದೆ ಎಂಬ ಅರಿವು ಅಂದಿನ ಬಿಜೆಪಿ ಸರ್ಕಾರಕ್ಕಿತ್ತು. ಹಾಗಿದ್ದರೂ, ಹೆಚ್ಚಳ ಮಾಡಲಾಗಿದೆ. ಆದರೆ, ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸಲು ಬಿಜೆಪಿ ವಿಫಲವಾಗಿತ್ತು ಎಂಬುವುದು ಕಾಂಗ್ರೆಸ್ ವಾದವಾಗಿದೆ.
ಮುಂದೇನು?
ಇದೀಗ ಹೈಕೋರ್ಟ್ ಹೆಚ್ಚಳವಾದ ಮೀಸಲಾತಿ ಪ್ರಮಾಣವನ್ನು ರದ್ದು ಮಾಡಿ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಡೆ ಏನು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡು, ಛತ್ತೀಸಗಢ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣವನ್ನು 50% ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸಲಾಗಿದೆ. ಕರ್ನಾಟಕ ರಾಜ್ಯವೂ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂಬ ಬೇಡಿಕೆ ಇದೆ. ಆದರೆ, ವಾಸ್ತವದಲ್ಲಿ ಇದು ಸಾಧ್ಯವೇ ಎಂಬುವುದು ಪ್ರಶ್ನೆಯಾಗಿದೆ.
