The government’s negligence towards the lives of surrendered Naxals: ಶಸ್ತ್ರಗಳನ್ನು ತೊರೆದು ಶರಣಾದ ನಕ್ಸಲರ ಬದುಕಿನ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಸರ್ಕಾರದ ಭರವಸೆಗಳನ್ನು ನಂಬಿಕೊಂಡು ಕಾಡು ತೊರೆದು ಮುಖ್ಯವಾಹಿನಿಗೆ ಮರಳಿದ ನಕ್ಸಲರ ಬದುಕಿನ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ಶಾಂತಿಗಾಗಿ ನಾಗರಿಕರ ವೇದಿಕೆ ಆರೋಪ ಮಾಡಿದೆ. ಸರ್ಕಾರದ ಮನವಿಗೆ ಸ್ಪಂದಿಸಿ ಶರಣಾದ ನಕ್ಸಲರು ಮಾತ್ರ ಇಂದಿಗೂ ಕನಿಷ್ಠ ಸೌಕರ್ಯವೂ ಇಲ್ಲದೆ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ ಎಂದು ಬೇಸರ ತೋಡಿಕೊಂಡಿದೆ.
- ಶಸ್ತ್ರಗಳನ್ನು ತೊರೆದು ಶರಣಾದ ನಕ್ಸಲರ ಬದುಕಿನ ಬಗ್ಗೆ ಸರ್ಕಾರದ ನಿರ್ಲಕ್ಷ್ಯ
- ಕಾಡು ತೊರೆದು ನಾಡಿಗೆ ಬಂದರೂ ಶರಣಾಗತ ಮಾವೋವಾದಿಗಳಿಗೆ ತಪ್ಪಿಲ್ಲ ಸಂಕಷ್ಟ
- ಸರ್ಕಾರದ ನಡೆಯ ಬಗ್ಗೆ ಶಾಂತಿಗಾಗಿ ನಾಗರಿಕರ ವೇದಿಕೆಯಿಂದ ಅಸಮಾಧಾನ

ಸರ್ಕಾರದ ಮೌನದ ಬಗ್ಗೆ ಪ್ರಶ್ನೆ..?
‘‘ಕೇರಳದ ತ್ರಿಶೂರ್ನ ಅತಿ ಭದ್ರತಾ ಜೈಲಿನಲ್ಲಿದ್ದ ಕರ್ನಾಟಕದ ನಕ್ಸಲ್ ನಿವಾಸಿ ಕೊಟ್ಟೆಹೊಳೆ ರವಿ ಅಲಿಯಾಸ್ ರವೀಂದ್ರ ಅವರು ಸರ್ಕಾರದ ನಡೆಗೆ ಬೇಸತ್ತು ಜೈಲಿನಲ್ಲೇ ನಿರಾಹಾರ ಮುಷ್ಕರ ನಡೆಸಿದ್ದರು. ಇದರಿಂದಾಗಿ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಪ್ರಸ್ತುತ ಅವರನ್ನು ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ತೀವ್ರ ಅನಾರೋಗ್ಯದಿಂದ ರವೀಂದ್ರ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಮೌನವಾಗಿದೆ. ಕೂಡಲೇ ಅವರನ್ನು ಕರ್ನಾಟಕಕ್ಕೆ ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದ್ದಾರೆ.
ಅಸಮಾಧಾನಗಳು ಏನೇನು?
2025ರ ಜನವರಿಯಲ್ಲಿ ಕರ್ನಾಟಕ ಪೊಲೀಸರಿಗೆ ಶರಣಾಗಿದ್ದ ರವೀಂದ್ರ ಸೇರಿದಂತೆ 8 ಮಂದಿ ನಕ್ಸಲರ ವಿರುದ್ಧದ ಪ್ರಕರಣಗಳನ್ನು 3 ತಿಂಗಳೊಳಗೆ ಹಿಂಪಡೆದು ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಮುಖ್ಯವಾಹಿನಿಗೆ ಬಂದವರಲ್ಲಿ ಬಹುತೇಕರು ಮೂಲಭೂತ ಸೌಕರ್ಯ ಮತ್ತು ಕೃಷಿ ಭೂಮಿಯ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಆದಿವಾಸಿ ಸಮುದಾಯದವರಾಗಿದ್ದಾರೆ. ಆದರೆ, ಸರಕಾರದ ವಿಳಂಬ ನೀತಿಯಿಂದಾಗಿ ಇವರು ಇಂದಿಗೂ ಕಾನೂನು ಹೋರಾಟ ನಡೆಸುತ್ತಿದ್ದಾರೆ ಎಂಬುವುದು ಸಮಿತಿಯ ಆರೋಪವಾಗಿದೆ.
ಕೇರಳದಲ್ಲಿ ಬಾಕಿ ಇರುವ ಪ್ರಕರಣಗಳ ಕಾರಣದಿಂದಾಗಿ ನಾಲ್ವರು ಅಲ್ಲಿನ ಜೈಲುಗಳಲ್ಲೇ ಬಂಧಿಯಾಗಿದ್ದಾರೆ. ರವೀಂದ್ರ ಅವರನ್ನು ಎನ್ಐಎ ವಶಕ್ಕೆ ಪಡೆದು ಯುಎಪಿಎ ಕಾಯಿದೆಯಡಿ ಬಂಧಿಸಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿಅವರನ್ನು ಬರಮಾಡಿಕೊಂಡು ಕರ್ನಾಟಕ ನಕ್ಸಲ್ ಮುಕ್ತ ಎಂದು ಘೋಷಿಸಿದ್ದರು. ಆದರೆ, ಶರಣಾದ ನಕ್ಸಲರು ಮಾತ್ರ ಇಂದಿಗೂ ಕನಿಷ್ಠ ಸೌಕರ್ಯವೂ ಇಲ್ಲದೆ ಸೆರೆಮನೆಯಲ್ಲಿ ಕಾಲ ದೂಡುವಂತಾಗಿದೆ ಎಂದು ಸಮಿತಿ ಬೇಸರ ವ್ಯಕ್ತಪಡಿಸಿದೆ.
