Navaratri: Characteristics of Mother Earth – Life values indicated by the nine colors: Navaratri : ನಾಡಿನೆಲ್ಲಡೆ ನವರಾತ್ರಿ / ದಸರಾ ಹಬ್ಬದ ಸಂಭ್ರಮ. ಒಂಬತ್ತು ದಿನಗಳಲ್ಲಿ ಒಂದೊಂದು ದಿನವೂ ವೈಷಿಷ್ಟ್ಯವನ್ನು ಹೊಂದಿರುತ್ತದೆ. ಒಂಬತ್ತು ದಿನಗಳಲ್ಲಿ ದಿನವೂ ಒಂದೊಂದು ಬಣ್ಣ ವಿಶೇಷ. ದಸರಾ ಹಬ್ಬವನ್ನು ಪ್ರಮುಖವಾಗಿ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ವಿಜ್ರುಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯ ವಿಶೇಷತೆ ಏನು, ಬಣ್ಣಗಳು ಏನನ್ನು ಸಾರುತ್ತದೆ ಎನ್ನುವುದನ್ನು ಇಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
- ನವದುರ್ಗೆಯರ ನವ ವರ್ಣಗಳು, ಜಗನ್ಮಾತೆಯ ಕೃಪೆ ಮತ್ತು ಜೀವನ ಮೌಲ್ಯಗಳು.
- ನವವರ್ಣಗಳ ಸಂಕೇತ : ನವರಾತ್ರಿಯ ಶುಭ ಸಂದೇಶ ಮತ್ತು ಬಣ್ಣಗಳ ಅರ್ಥ.
- ಕರ್ನಾಟಕ ಮತ್ತು ಬಂಗಾಳ ಪ್ರಾಂತಗಳಲ್ಲಿ ನವರಾತ್ರಿ ಹಬ್ಬವು ಅತ್ಯಂತ ವೈಭವದಿಂದ ಆಚರಣೆ.
![]()
ಭಾರತೀಯ ಹಬ್ಬಗಳು ಹೊರಸೂಸುವ ಜೀವನೋತ್ಸಾಹದ ಮೂಲಕ ಜಗತ್ತಿನಾದ್ಯಂತ ವರ್ಣರಂಜಿತವೂ ಹಾಗೂ ಸ್ವಾಗತಾರ್ಹವೂ ಆಗಿದೆ. ಸನಾತನ ಪರಂಪರೆಯಲ್ಲಿ ಸಂವತ್ಸರವೊಂದರಲ್ಲಿ 700ಕ್ಕೂ ಹೆಚ್ಚು ಹಬ್ಬಗಳಿದ್ದು ಅವುಗಳಲ್ಲಿ ನವರಾತ್ರಿಯು ವೈವಿಧ್ಯಮಯವೆನಿಸಿ ಮಾನವನ ಸಾಂಸ್ಕೃತಿಕ ಮತ್ತು ಆಧ್ಯತ್ಮಿಕ ಬೆಳವಣಿಗೆಗೆ ಪೂರಕವಾಗಿದೆ. ನವರಾತ್ರಿಯು ವೈಭವ ಪೂರ್ಣ ಹಾಗೂ ಪವಿತ್ರ ಆಚರಣೆಯುಣಿಸಿ ಕನ್ನಡದ ನೆಲದಲ್ಲಿ ನಾಡಹಬ್ಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಮ್ಮ ನಾಡಹಬ್ಬವಾದ ನವರಾತ್ರಿಯು ದಸರಾ ಅಥವಾ ದಶಹರ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಪ್ರತಿವರ್ಷವೂ ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿ ಪಾದ್ಯಮಿಯಿಂದ ದಶಮಿಯ ತನಕ ಆಚರಿಸಲ್ಪಡುವ ಪವಿತ್ರವೂ, ಮಹಿಮೆಯಿಂದ ಕೂಡಿದ ನವರಾತ್ರಿಯು ಹತ್ತನೇ ದಿನದಂದು ʼವಿಜಯದಶಮಿʼ ಎಂದು ಖ್ಯಾತವಾಗಿದೆ.
ಆದಿಶಕ್ತಿಯ ಒಂಬತ್ತು ವಿಭಿನ್ನ ಸ್ವರೂಪಗಳನ್ನು ಆರಾಧಿಸುವ ವಿಶಿಷ್ಟ ಹಬ್ಬ: ನಮ್ಮ ಕರ್ನಾಟಕದ ವಿವಿಧ ಭಾಗಗಳಲ್ಲಿ ವೈವಿಧ್ಯವಾಗಿ, ವಿಷೇಶವಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಮ, ಪೂಜೆ, ಗೊಂಬೆ ಕೂರಿಸುವುದು, ಲಲಿತಾರಾಧನೆ, ಸರಸ್ವತೀ ಪೂಜೆ, ಆಯುಧ ಪೂಜೆ ಹೀಗೆ ಇವೇ ಮೊದಲಾದವುಗಳು ಹಬ್ಬದ ವಿಶೇಷತೆಗಳಾಗಿವೆ. ನವರಾತ್ರಿಯು ನವದುರ್ಗೆಯರೆಂದೇ ಪ್ರಸಿದ್ಧರಾದ ಆದಿಶಕ್ತಿಯ ಒಂಬತ್ತು ವಿಭಿನ್ನ ಸ್ವರೂಪಗಳನ್ನು ಆರಾಧಿಸುವ ವಿಶಿಷ್ಟ ಹಬ್ಬವಾಗಿದೆ. ಉಪವಾಸ, ಆಧ್ಯಾತ್ಮಿಕ ಸಾಧನೆ, ಮೌನಾಚರಣೆ, ಪವಿತ್ರ ಹೋಮಗಳು, ವೈವಿಧ್ಯಮಯ ಆಹಾರ ಪದಾರ್ಥಗಳು, ನೃತ್ಯ, ಸಂಗೀತ, ವರ್ಣರಂಜಿತ ಅಲಂಕಾರಗಳು ಮತ್ತು ಬಣ್ಣಬಣ್ಣದ ಉಡುಪುಗಳನ್ನು ಧರಿಸುವುದು ಸೇರಿದಂತೆ ಅನೇಕ ಆಚರಣೆಗಳು ಈ ಹಬ್ಬದ ಸಂಭ್ರಮದಲ್ಲಿ ಅಡಕವಾಗಿದೆ.
ಪ್ರತಿದಿನ ಒಂದೊಂದು ಬಣ್ಣವನ್ನು ಸಾಂಕೇತಿಕವಾಗಿ ಧರಿಸುವ ಸಂಪ್ರದಾಯ
ನವರಾತ್ರಿಯಂದು ಪ್ರತಿದಿನ ಒಂದೊಂದು ಬಣ್ಣವನ್ನು ಸಾಂಕೇತಿಕವಾಗಿ ಧರಿಸಿ, ಹಬ್ಬದ ರಂಗನ್ನು ಹೆಚ್ಚಿಸುವ ವಿಚಾರವೂ ಸ್ವಾಗತಾರ್ಹವೇ. ಈ ಆಚರಣೆಯನ್ನು ಸಾರ್ವತ್ರಿಕವಾಗಿ ಜನಸಾಮಾನ್ಯರೂ ಕೂಡ ಶ್ರದ್ಧೆಯಿಂದ ಜಾತಿ – ಮತ ಭೇದವನ್ನೂ ಮೀರಿ ಆಚರಿಸುವಂತಾಗಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ನೀಡುತ್ತಿರುವ ಉತ್ತೇಜನ ಹಾಗೂ ಸಹಕಾರಗಳು ಅತ್ಯಮೂಲ್ಯವಾದವು.
ಬಣ್ಣಗಳ ಬಗ್ಗೆ ಹೇಳುವುದಾದರೆ ಪ್ರತಿ ವರ್ಷ ನವರಾತ್ರಿಯ ಒಂಬತ್ತು ಬಣ್ಣಗಳು ಒಂದೇ ಆಗಿದ್ದರೂ, ನವರಾತ್ರಿ ಆರಂಭವಾಗುವ ವಾರದ ದಿನಕ್ಕೆ ಅನುಗುಣವಾಗಿ ಬಣ್ಣಗಳ ಕ್ರಮ ಬದಲಾಗುತ್ತದೆ.
ಈ ವರ್ಷದ ನವರಾತ್ರಿಯ ಒಂಬತ್ತು ದಿನಗಳು, ಅವುಗಳ ಬಣ್ಣಗಳು ಮತ್ತು ದೇವಿಯ ಒಂಬತ್ತು ರೂಪಗಳ ವಿವರ ಇಲ್ಲಿದೆ.
| ದಿನಾಂಕ | ವಾರದ ದಿನ | ಬಣ್ಣ | ದೇವಿಯ ರೂಪ |
| ಅಕ್ಟೋಬರ್ 11 | ಭಾನುವಾರ | ಕಿತ್ತಳೆ | ಶೈಲಪುತ್ರಿ |
| ಅಕ್ಟೋಬರ್ 12 | ಸೋಮವಾರ | ಬಿಳಿ | ಬ್ರಹ್ಮಚಾರಿಣಿ |
| ಅಕ್ಟೋಬರ್ 13 | ಮಂಗಳವಾರ | ಕೆಂಪು | ಚಂದ್ರಘಂಟಾ |
| ಅಕ್ಟೋಬರ್ 14 | ಬುಧವಾರ | ರಾಯಲ್ ನೀಲಿ | ಕೂಷ್ಮಾಂಡಾ |
| ಅಕ್ಟೋಬರ್ 15 | ಗುರುವಾರ | ಹಳದಿ | ಸ್ಕಂದಮಾತಾ |
| ಅಕ್ಟೋಬರ್ 16 | ಶುಕ್ರವಾರ | ಹಸಿರು | ಕಾತ್ಯಾಯನಿ |
| ಅಕ್ಟೋಬರ್ 17 | ಶನಿವಾರ | ಬೂದು | ಕಾಲರಾತ್ರಿ |
| ಅಕ್ಟೋಬರ್ 18 | ಭಾನುವಾರ | ನೇರಳೆ | ಮಹಾಗೌರಿ |
| ಅಕ್ಟೋಬರ್ 19 | ಸೋಮವಾರ | ನವಿಲು ಹಸಿರು | ಸಿದ್ಧಿದಾತ್ರಿ |
ಒಂದೇ ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸಬಹುದು : ನವರಾತ್ರಿಯ ಪ್ರತಿಯೊಂದು ದಿನವೂ ಒಂದು ನಿರ್ದಿಷ್ಟ ಬಣ್ಣದೊಂದಿಗೆ ಸಂಬಂಧ ಹೊಂದಿದೆ. ಆ ಬಣ್ಣವು ಪ್ರತಿನಿಧಿಸುವ ಗುಣ ಮತ್ತು ಸಂಕೇತಾರ್ಥವೇ ಇದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿಯೂ ಸಹೋದ್ಯೋಗಿಗಳೊಂದಿಗೆ ಒಂದೇ ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸಬಹುದು. ಈ ಬಣ್ಣಗಳು ದೇವಿಯ ವಿವಿಧ ಗುಣಗಳನ್ನು ಪ್ರತಿಬಿಂಬಿಸುವುದರ ಜೊತೆಗೆ, ಜೀವನದ ವಿಭಿನ್ನ ಮೌಲ್ಯಗಳನ್ನು ನೆನಪಿಸುತ್ತವೆ.
1. ಕಿತ್ತಳೆಬಣ್ಣ: ಕಿತ್ತಳೆ ಬಣ್ಣವು ಕಾಂತಿ, ತೇಜಸ್ಸು, ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿದೆ. ಇದು ಜೀವನದಲ್ಲಿ ಚೈತನ್ಯದಿಂದ ಮುನ್ನಡೆಯುವ ಪ್ರೇರಣೆಯನ್ನು ನೀಡುತ್ತದೆ.
2. ಬಿಳಿಬಣ್ಣ: ಬಿಳಿ ಬಣ್ಣವು ಶಾಂತಿ, ಪವಿತ್ರತೆ ಮತ್ತು ಪರಿಶುದ್ಧತೆಯನ್ನು ಪ್ರತಿನಿಧಿಸುತ್ತದೆ. ದೇವಿಯ ಆರಾಧನೆಯಲ್ಲಿ ಭಕ್ತಿ, ಪ್ರಾರ್ಥನೆ ಮತ್ತು ನಿರ್ಮಲ ಮನಸ್ಸಿನ ಮಹತ್ವವನ್ನು ಇದು ಸಾರುತ್ತದೆ.
3. ಕೆಂಪುಬಣ್ಣ: ಕೆಂಪು ಬಣ್ಣವು ಕ್ರಿಯಾಶೀಲತೆ, ಧೈರ್ಯ, ಶೌರ್ಯ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ದೇವಿಯ ಉಗ್ರ ಹಾಗೂ ಪರಾಕ್ರಮದ ಸ್ವರೂಪವನ್ನು ಇದು ಪ್ರತಿಬಿಂಬಿಸುತ್ತದೆ.
4. ರಾಯಲ್ ನೀಲಿ ಬಣ್ಣ : ರಾಯಲ್ ನೀಲಿ ಬಣ್ಣವು ಪ್ರಶಾಂತತೆ ಮತ್ತು ಆಳವಾದ ಜ್ಞಾನದ ಸಂಕೇತವಾಗಿದೆ. ವಿಶಾಲವಾದ ನೀಲಾಕಾಶದಂತೆ ಜ್ಞಾನದ ಆಳವೂ ಅಪಾರ ಎಂಬುದನ್ನು ಇದು ನೆನಪಿಸುತ್ತದೆ.
5. ಹಳದಿಬಣ್ಣ: ಹಳದಿ ಬಣ್ಣವು ಬೆಳಕು, ಸಂತೋಷ, ಉಲ್ಲಾಸ ಮತ್ತು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಬದುಕಿನಲ್ಲಿ ಸಂತೋಷ ಮತ್ತು ಆಶಾವಾದದ ಮಹತ್ವವನ್ನು ಇದು ಸಾರುತ್ತದೆ.
6. ಹಸಿರುಬಣ್ಣ: ಹಸಿರು ಬಣ್ಣವು ಬೆಳವಣಿಗೆ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಪ್ರಕೃತಿಯ ಜೀವಂತಿಕೆ ಹಾಗೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಆಶಯವನ್ನು ಇದು ಪ್ರತಿಬಿಂಬಿಸುತ್ತದೆ.
7. ಬೂದುಬಣ್ಣ: ಬೂದು ಬಣ್ಣವು ಸಮತೋಲನದ ಸಂಕೇತವಾಗಿದೆ. ಜೀವನದ ಏರಿಳಿತಗಳ ನಡುವೆ ಸ್ಥಿರತೆ ಮತ್ತು ಸಮಚಿತ್ತತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಇದು ತಿಳಿಸುತ್ತದೆ.
8. ನೇರಳೆಬಣ್ಣ: ನೇರಳೆ ಬಣ್ಣವು ವೈಭವ, ಘನತೆ, ಅಪರೂಪದ ವೈಶಿಷ್ಟ್ಯ ಮತ್ತು ಆಧ್ಯಾತ್ಮಿಕತೆಯನ್ನು ಸಂಕೇತಿಸುತ್ತದೆ. ಇದು ಭಕ್ತಿ, ರಹಸ್ಯಮಯತೆ ಮತ್ತು ಉನ್ನತ ಚಿಂತನೆಯೊಂದಿಗೆ ಸಂಬಂಧ ಹೊಂದಿದೆ.
9. ನವಿಲು ಹಸಿರುಬಣ್ಣ: ನವಿಲು ಹಸಿರು ಬಣ್ಣವು ವಿಶಿಷ್ಟತೆ ಮತ್ತು ವೈಯಕ್ತಿಕತೆಯ ಪ್ರತೀಕವಾಗಿದೆ. ಪ್ರತಿಯೊಬ್ಬರಲ್ಲಿರುವ ವಿಭಿನ್ನ ಸಾಮರ್ಥ್ಯ, ಸೃಜನಶೀಲತೆ ಮತ್ತು ವಿಶೇಷ ಗುಣಗಳನ್ನು ಇದು ಪ್ರತಿಬಿಂಬಿಸುತ್ತದೆ.
ತಾಯಿ ಜಗನ್ಮಾತೆ ಒಳಿತುಮಾಡಲಿ: ನವರಾತ್ರಿಯ ಆಚರಣೆಯು ದೇವಿಯ ಆರಾಧನೆಯ ಜೊತೆಗೆ ನಮ್ಮೊಳಗಿನ ಸಕಾರಾತ್ಮಕ ಗುಣಗಳನ್ನು ಅರಿತು ಬೆಳೆಸಿಕೊಳ್ಳುವ ಅವಕಾಶವೂ ಆಗಿದೆ. ದುರ್ಗೆ, ಲಕ್ಷ್ಮಿ, ಸರಸ್ವತಿ, ಚಾಮುಂಡಿ, ಲಲಿತಾ, ಭುವನೇಶ್ವರೀ ಭಗವತೀ ಸೇರಿದಂತೆ ದೇವಿಯ ವಿವಿಧ ರೂಪಗಳು ಶಕ್ತಿ, ಸಮೃದ್ಧಿ, ಜ್ಞಾನ, ಧೈರ್ಯ ಮತ್ತು ಸೃಜನಶೀಲತೆಯ ಸಂಕೇತಗಳಾಗಿವೆ. ನವರಾತ್ರಿಯು ಸ್ತ್ರೀಯರಲ್ಲಿರುವ ಅಸೀಮ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಸೃಜನಶೀಲ ಶಕ್ತಿಯನ್ನು ಗೌರವಿಸುವುದರ ಜೊತೆಗೆ, ಸಮಾಜದಲ್ಲಿ ನಾರಿಯ ಮಹತ್ವವನ್ನು ಸಾರುತ್ತದೆ. ಎಲ್ಲರಿಗೂ ತಾಯಿ ಜಗನ್ಮಾತೆ ಒಳಿತುಮಾಡಲಿ ಎಂದು ಪ್ರಾರ್ಥಿಸುತ್ತಾ, ನವರಾತ್ರಿ ಶುಭಾಶಯಗಳೊಂದಿಗೆ ಇಂದಿನ ಈ ವಿಚಾರವನ್ನು ತಮ್ಮ ಮನದಾಳಕ್ಕೆ ಸಮರ್ಪಿಸುತ್ತೇನೆ. ಮುಂದಿನ ಲೇಖನದೊಂದಿಗೆ ಭೇಟಿಯಾಗೋಣ…!!
