ಬೆಂಗಳೂರು ಅ.14: ರಂದು ರಾಜ್ಯದಲ್ಲಿ ಒಂದೇ ದಿನ ಮೂರು ಕಡೆ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರಿನ ಯಲಹಂಕದ ರಾಜಾನಕುಂಟೆ ಸಮೀಪ ರೈಲ್ವೆ ಹಳಿ ಮೇಲೆ ನಿಂತಿದ್ದ ರೈಲು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲೇ ಹೊತ್ತಿ ಉರಿದಿದೆ. ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಟಿವಿ, ಫ್ರಿಡ್ಜ್ ಹಾಗೂ ವಾಷಿಂಗ್ ಮಷೀನ್ ಅಸೆಂಬ್ಲಿ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಮೈಸೂರಿನ ವಸ್ತು ಪ್ರದರ್ಶನದ ಆವರಣದ ಹೊರಗಡೆ ಕೂಡ ಬೆಂಕಿ ಅವಘಡ ಸಂಭವಿಸಿದೆ.
2 ರೈಲು ಬೋಗಿಗಳು ಬೆಂಕಿಗಾವುತಿ : ಯಲಹಂಕದಲ್ಲಿ ಕಳೆದ ಎರಡು ತಿಂಗಳಿಂದ ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಬೋಗಿಗಳಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇತ್ತ ಚಿಕ್ಕಬಳ್ಳಾಪುರದಲ್ಲೂ ಭಾರೀ ಅಗ್ನಿ ಅವಘಡ : ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಟಿವಿ, ಫ್ರಿಡ್ಜ್ ಹಾಗೂ ವಾಷಿಂಗ್ ಮಷೀನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರ್ಖಾನೆಯಲ್ಲಿದ್ದ ಗೃಹೋಪಯೋಗಿ ಉತ್ಪನ್ನಗಳು ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಕೋಟಿ-ಕೋಟಿ ವಸ್ತುಗಳು ಬೆಂಕಿಗಾವುತಿ : ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಮಸ್ತೇನಹಳ್ಳಿ ಗ್ರಾಮದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಗರುಡ ಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಕೋಟಿ ಕೋಟಿ ಮೌಲ್ಯದ ವಸ್ತುಗಳು ಬೆಂಕಿಗಾವುತಿಯಾಗಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.
ಮೈಸೂರಿನಲ್ಲೂ ಸಣ್ಣ ಬೆಂಕಿ ಅವಘಡ: ವಸ್ತು ಪ್ರದರ್ಶನದ ಆವರಣದ ಹೊರಗಡೆ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಕಸಕ್ಕೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರೋ ಶಂಕೆ ವ್ಯಕ್ತವಾಗಿದ್ದು, ಕ್ಷಣದಲ್ಲೇ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ.