HD KUMARASWAMY: “Hard work pays off – this is my pledge for 2028” Kumaraswamy’s new slogan. – ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದು, ‘ಪರಿಶ್ರಮಕ್ಕೆ ತಕ್ಕ ಪ್ರತಿಫಲ’ ಎಂಬ ಘೋಷವಾಕ್ಯದೊಂದಿಗೆ ರಾಜಕೀಯ ಸಿದ್ಧತೆ ಆರಂಭಿಸಿದ್ದಾರೆ.

ಯುವಕರೊಂದಿಗೆ ನಡೆದ ಸಂವಾದದಲ್ಲಿ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಭರವಸೆ ನೀಡಿದ್ದಾರೆ.
ನಮ್ಮ ರಾಜ್ಯದ ಜನರ ಬೆಂಬಲದೊಂದಿಗೆ ಮುಂದಿನ ಚುನಾವಣೆಯಲ್ಲಿ ನಾವು ಯಶಸ್ಸು ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ತಮ್ಮ ಮುಂದಿನ ಆಡಳಿತದ ರೂಪುರೇಷೆಯಲ್ಲಿ ಎಂಟು ಯೋಜನೆಗಳನ್ನು ಸಿದ್ಧಪಡಿಸಿದ್ದು, ಯುವಕರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಪ್ರಸ್ತಾಪಿತ ಯೋಜನೆಯಂತೆ, ಪ್ರತಿ ಕುಟುಂಬಕ್ಕೂ ಕನಿಷ್ಠ ಒಬ್ಬರಿಗೆ ಉದ್ಯೋಗ ದೊರೆಯುವ ವ್ಯವಸ್ಥೆ ರೂಪಿಸುವ ಉದ್ದೇಶವಿದೆ. ದೀರ್ಘಾವಧಿಯ ಉದ್ಯೋಗದ ಬದಲಿಗೆ ಕೆಲಸದ ಅವಧಿಯನ್ನು 10ರಿಂದ 15 ವರ್ಷಗಳಿಗೆ ಸೀಮಿತಗೊಳಿಸಿ, ಉಳಿದ ಹುದ್ದೆಗಳಲ್ಲಿ ಉದ್ಯೋಗ ವಂಚಿತರಿಗೆ ಅವಕಾಶ ನೀಡುವ ಚಿಂತನೆಯನ್ನೂ ಅವರು ಮುಂದಿಟ್ಟಿದ್ದಾರೆ. ಈ ಪ್ರಸ್ತಾವನೆ ಕುರಿತು ಯುವಕರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಹೀಗಾಗಿ ಭವಿಷ್ಯದಲ್ಲಿ ಅವಕಾಶ ದೊರೆತರೆ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಯುವ ನಿರುದ್ಯೋಗ ಸಮಸ್ಯೆಯನ್ನು ಪ್ರಮುಖ ವಿಚಾರವನ್ನಾಗಿಸಿಕೊಂಡಿರುವ ಅವರು, ಜನರ ವಿಶ್ವಾಸ ಗಳಿಸಿ 2028ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿ ಹೊಂದಿದ್ದಾರೆ.
