Bengaluru Traffic: Complete information on traffic restrictions around the stadium, alternative routes, and parking spaces due to the high-voltage match is here!: – ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ಟಿ-20 ಪಂದ್ಯದ ಹಿನ್ನೆಲೆ, ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮದ ಜೊತೆಗೆ ದೊಡ್ಡದೊಂದು ಸಂಚಾರ ತಲೆನೋವು ಎದುರಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ರೋಚಕ ಟಿ-20 ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿರುವ ಜನರಿಗೆ ಬೆಂಗಳೂರು ಸಂಚಾರ ಪೊಲೀಸರು ಬಿಗ್ ಅಲರ್ಟ್ ನೀಡಿದ್ದಾರೆ. ಮೈದಾನದ ಸುತ್ತಮುತ್ತ ಭಾರೀ ಜನಸಂದಣಿ ಮತ್ತು ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸ್ಟೇಡಿಯಂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಂದ್ಯ ನೋಡಲು ಹೋಗುವ ಮುನ್ನ ಈ ಮಹತ್ವದ ಬದಲಾವಣೆಗಳ ಬಗ್ಗೆ ನೀವು ತಿಳಿಯಲೇಬೇಕು.
ವಾಹನ ನಿಲುಗಡೆಗೆ ಸಂಪೂರ್ಣ ನಿರ್ಬಂಧ: ಪಂದ್ಯದ ದಿನದಂದು ಸ್ಟೇಡಿಯಂ ಸುತ್ತಮುತ್ತ ಯಾವುದೇ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಪೊಲೀಸರ ಕಟ್ಟುನಿಟ್ಟಿನ ನಿರ್ಬಂಧವಿರುವ ಪ್ರಮುಖ ರಸ್ತೆಗಳ ಪಟ್ಟಿ ಇಲ್ಲಿದೆ.
ಕ್ವೀನ್ಸ್ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಹಾಗೂ ಸಿಟಿಒ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಗಳು.
ಎಂ.ಜಿ. ರಸ್ತೆ: ಕ್ವೀನ್ಸ್ ವೃತ್ತದಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ಎರಡೂ ಬದಿಗಳಲ್ಲಿ ಪಾಕಿರ್ಂಗ್ ನಿಷೇಧ.
ಕಬ್ಬನ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್: ಸಿಟಿಒ ವೃತ್ತದಿಂದ ಮಣಿಪಾಲ್ ವೃತ್ತದವರೆಗೆ ಮತ್ತು ಸೆಂಟ್ರಲ್ ಸ್ಟ್ರೀಟ್ನ ಎರಡೂ ಕಡೆಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಇತರ ಪ್ರಮುಖ ರಸ್ತೆಗಳು: ಕಾಮರಾಜ ರಸ್ತೆ, ಸೇಂಟ್ ಮಾಕ್ರ್ಸ್ ರಸ್ತೆ, ಕಸ್ತೂರಬಾ ರಸ್ತೆ, ರಾಜಭವನ ರಸ್ತೆ, ರೇಸ್ಕೋರ್ಸ್ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ ಮತ್ತು ಪ್ರೆಸ್ಕ್ಲಬ್ ಮುಂಭಾಗ ಸಂಪೂರ್ಣ ನಿಬರ್ಂಧವಿದೆ.
ಪಾರ್ಕಿಂಗ್ ಗೆ ಪರ್ಯಾಯ ಸ್ಥಳಗಳೆಲ್ಲಿ?: ನಿಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸರು ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ಕೆಲ ನಿರ್ದಿಷ್ಟ ಪರ್ಯಾಯ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಿದ್ದಾರೆ.
ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನ ಹಾಗೂ ಸೇಂಟ್ ಜೋಸೆಫ್ಸ್ ಬಾಲಕರ ಶಾಲಾ ಮೈದಾನ (ಮ್ಯೂಸಿಯಂ ರಸ್ತೆ).
ಯುಬಿ ಸಿಟಿ ಕಟ್ಟಡದ ವಿಶಾಲವಾದ ಪಾರ್ಕಿಂಗ್ ಸ್ಥಳ.
ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ 1ನೇ ಮಹಡಿ.
ಸ್ವಾತಂತ್ರ್ಯ ಉದ್ಯಾನದ ಎಂಎಲ್ಸಿಪಿ ಪಾರ್ಕಿಂಗ್ ಸ್ಥಳ.
ಕ್ಯಾಬ್ ಮತ್ತು ಆಟೋ ಪ್ರಯಾಣಿಕರಿಗೆ ಗಮನಿಸಿ: ನೀವು ಓಲಾ, ಉಬರ್ ಅಥವಾ ಆಟೋಗಳಲ್ಲಿ ಪಂದ್ಯಕ್ಕೆ ಬರುವುದಾದರೆ, ಡ್ರೈವರ್ಗಳು ನಿಮಗಾಗಿ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ಮಾತ್ರ ಪಿಕ್ಅಪ್ ಮತ್ತು ಡ್ರಾಪ್ ಮಾಡಲು ಅವಕಾಶ ನೀಡಲಾಗಿದೆ. ಕಬ್ಬನ್ ರಸ್ತೆಯಲ್ಲಿ ಬ್ರಾವೋ ಜಂಕ್ಷನ್ನಿಂದ ಸಿಟಿಒ ಸರ್ಕಲ್ವರೆಗೆ ಮಾತ್ರ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತ ವಾಹನಗಳ ನಿಲುಗಡೆಗೆ ತೀವ್ರ ಸ್ಥಳದ ಕೊರತೆ ಇರುವುದರಿಂದ, ದಯವಿಟ್ಟು ನಿಮ್ಮ ಸ್ವಂತ ವಾಹನಗಳನ್ನು ಮನೆಯಲ್ಲಿಯೇ ಬಿಟ್ಟು ಮೆಟ್ರೋ ರೈಲು ಅಥವಾ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಿ. ಸುಗಮ ಸಂಚಾರಕ್ಕೆ ಪೊಲೀಸರೊಂದಿಗೆ ಸಹಕರಿಸಿ, ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯವನ್ನು ಆನಂದಿಸಿ.
