After Tiger Shroff, Salman Khan is the target: ‘Dawood’s dog’ is certain to die! Bishnoi gang shakes Bollywood :ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೂಗತ ಪಾತಕಿ “ದಾವೂದ್ ಇಬ್ರಾಹಿಂ ಸಾಕಿದ ನಾಯಿ” ಎಂದು ಕರೆದಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬಳಿಕ ಮುಂದಿನ ಸರದಿ ಆತನದ್ದೇ ಎಂದು ಎಚ್ಚರಿಸಿದೆ. ಈ ಕುರಿತು ಅನಿಲ್ ಪಂಡಿತ್ ಎಂಬ ವ್ಯಕ್ತಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ, ಕೃಷ್ಣಮೃಗ ಕೊಲ್ಲುವ ಮೂಲಕ ಬಿಷ್ಣೋಯ್ ಸಮುದಾಯಕ್ಕೆ ನೋವುಂಟು ಮಾಡಿರುವ ಸಲ್ಮಾನ್ ಖಾನ್ ಅವರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಗುಡುಗಿದ್ದಾನೆ.
- ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ.
- ಮುಂದಿನ ಸರದಿ ನಟ ಸಲ್ಮಾನ್ ಖಾನ್ ಅವರದ್ದು ಎಂದು ಎಚ್ಚರಿಕೆಯ ಸಂದೇಶ.
- ಸಲ್ಮಾನ್ ಖಾನ್ ಜೊತೆ ಚಲನಚಿತ್ರಗಳಲ್ಲಿ ನಟಿಸಿದ್ದೇ ಟೈಗರ್ ಶ್ರಾಫ್ಗೆ ಮುಳುವಾಯಿತಾ?
![]()
ಮುಂಬೈ: ಇಲ್ಲಿನ ಜುಹು ಪ್ರದೇಶದಲ್ಲಿ ನಿನ್ನೆ ಅ.18-ಭಾನುವಾರ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಬೈಕ್ನಲ್ಲಿ ಬಂದ ಮೂವರು ಅಪರಿಚತರು, ನಟನ ಮೇಲೆ ಗುಂಡು ಹಾರಿಸಿದ್ದು, ಜಾಕಿ ಶ್ರಾಫ್ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ಗುಂಡಿನ ದಾಳಿಯಲ್ಲಿ ಅವರ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆಯ ನಂತರ ಹೊರಬಿದ್ದ ಆಡಿಯೋ ಕ್ಲಿಪ್ ಒಂದರಲ್ಲಿ, ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ. ಅಲ್ಲದೆ, ಮುಂಬೈ ಚಲನಚಿತ್ರೋದ್ಯಮದಲ್ಲಿ ನಟ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವ ಇತರರಿಗೂ ಆತ ಬೆದರಿಕೆ ಹಾಕಿದ್ದಾನೆ.
ಆಡಿಯೋದಲ್ಲಿ ಮಾತನಾಡಿರುವ ಅನಿಲ್ ಪಂಡಿತ್ ಎಂಬ ವ್ಯಕ್ತಿ, “ಟೈಗರ್ ಶ್ರಾಫ್ ಅವರು ತಮ್ಮ ಗ್ಯಾಂಗ್ನ ಸೂಚನೆಗಳನ್ನು ನಿರ್ಲಕ್ಷಿಸಿ, ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನಿಂದ ಪದೇ ಪದೇ ಬೆದರಿಕೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದರಿಂದಲೇ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾನೆ.
ಸಲ್ಮಾನ್ ಖಾನ್ ಮನೆಗೆ ಭದ್ರತೆ: ತನ್ನ ಮುಂದಿನ ಗುರಿ ನಟ ಸಲ್ಮಾನ್ ಖಾನ್ ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿರುವ ಹಿನ್ನೆಲೆಯಲ್ಲಿ, ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಭದ್ರತೆ ಹೆಚ್ಚಿಸಲಾಗಿದೆ. ಅಪಾರ್ಟ್ಮೆಂಟ್ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ತಪಾಸಣೆ ಮಾಡದೇ ಯಾರನ್ನೂ ಒಳಗೆ ಬಿಡುತ್ತಿಲ್ಲ.
“ಚಲನಚಿತ್ರೋದ್ಯಮದಲ್ಲಿ ನಮ್ಮ ಮಾತನ್ನು ಕೇಳದೆ ಬೇರೆಯಾಗಿ ಕೆಲಸ ಮಾಡುವವರು ಅಥವಾ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವವರನ್ನು ನಾವು ಕೊಲ್ಲುತ್ತೇವೆ. ಇದೇ ಮೊದಲ ಮತ್ತು ಕೊನೆಯ ಎಚ್ಚರಿಕೆ. ಈ ಸಲ್ಮಾನ್ ಖಾನ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಾಕಿದ ನಾಯಿ. ನಾವು ದಾವೂದ್ ಹೆಸರಿನ ನಾಯಿಯನ್ನೇ ಮನೆಯಲ್ಲಿ ಇಟ್ಟುಕೊಂಡಿದ್ದೇವೆ” ಎಂದು ಆ ಆಡಿಯೋದಲ್ಲಿ ಆ ವ್ಯಕ್ತಿ ಹೇಳಿರುವುದು ಕೇಳಿಸುತ್ತದೆ.
“ನಾವು ಟೈಗರ್ ಶ್ರಾಫ್ಗೆ ಕರೆ ಮಾಡಿ ವಿಷಯವನ್ನು ವಿವರಿಸಿದ್ದೆವು. ಆದರೆ ಅವನಿಗೆ ಅರ್ಥವಾಗಲಿಲ್ಲ. ಹಾಗಾಗಿ, ನಾವು ಅವನಿಗೆ ಸರಿಯಾಗಿ ವಿವರಿಸಿದೆವು” ಎಂದು ಆ ಸಂದೇಶದಲ್ಲಿ ತಿಳಿಸಲಾಗಿದೆ.
ಟೈಗರ್ ಭೇಟಿ ಮಾಡಿದ ಶಿಂಧೆ: ಈ ಮಧ್ಯೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಗುಂಡಿನ ದಾಳಿಗೊಳಗಾದ ನಟ ಟೈಗರ್ ಶ್ರಾಫ್ ಅವರನ್ನು ಭೇಟಿ ಮಾಡಿದ್ದಾರೆ. ಟೈಗರ್ ಆರೋಗ್ಯ ವಿಚಾರಿಸಿದ ಶಿಂಧೆ, ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿಷ್ಣೋಯ್ ಗ್ಯಾಂಗ್ಗೆ ಎಚ್ಚರಿಕೆ ನೀಡಿದ್ದಾರೆ.
ಸಲ್ಮಾನ್ ಖಾನ್ ಮೇಲೆಕೆ ದ್ವೇಷ?
1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣವು ಬಿಷ್ಣೋಯಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿರುವ ಈ ಗ್ಯಾಂಗ್, ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಯೋಜಿಸಿರುವ 10 ಪ್ರಮುಖ ಗುರಿಗಳ ಪಟ್ಟಿಯಲ್ಲಿ ಅವರನ್ನು ಅಗ್ರಸ್ಥಾನದಲ್ಲಿ ಇರಿಸಿದೆ ಎಂದು 2023ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿತ್ತು.
ಸಲ್ಮಾನ್ ಖಾನ್ ಹತ್ಯೆಗೆ ಬಿಷ್ಣೋಯ್ ಗ್ಯಾಂಗ್ ಸಂಚು ರೂಪಿಸುತ್ತಿದ್ದು, ಅನೇಕ ಬಾರಿ ಕೊಲೆ ಬೆದರಿಕೆ ಹಾಕಲಾಗಿದೆ. ಸದ್ಯ ಟೈಗರ್ ಶ್ರಾಫ್ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ, ಸಲ್ಮಾನ್ ಖಾನ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಮುಂಬೈ ಪೊಲೀಸರು ಹೆಚ್ಚಿಸಿದ್ದಾರೆ.
