Devaragudda Karanika: ‘He who kisses the Red Fort is powerful’, Goravayya’s prophecy; What does it mean? – ಹಾವೇರಿ ಜಿಲ್ಲೆಯ ದೇವರಗುಡ್ಡ ಮಾಲತೇಶ ಸ್ವಾಮಿಯ ನವರಾತ್ರಿ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ದೈವವಾಣಿ ನುಡಿದಿದ್ದಾರೆ. ಈ ನುಡಿಯು ಮುಂಗಾರಿನಿಂದ ಕಂಗಾಲಾಗಿದ್ದ ಅನ್ನದಾತರಿಗೆ ಹಿಂಗಾರು ಮಳೆಯಿಂದ ಸಮೃದ್ಧ ಬೆಳೆ ಬರುವ ಭರವಸೆ ಮೂಡಿಸಿದೆ. ಮತ್ತೊಂದೆಡೆ, ರಾಜಕೀಯವಾಗಿ ಸಾಧು-ಸಂತರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಪ್ರಧಾನಿಯಾಗುವ ಸಾಧ್ಯತೆಯ ಮುನ್ಸೂಚನೆ ಇದಾಗಿದೆ ಎಂದು ಪ್ರಧಾನ ಅರ್ಚಕರು ವಿಶ್ಲೇಷಿಸಿದ್ದಾರೆ.
- ಮಾಲತೇಶ ಸ್ವಾಮಿಯ ನವರಾತ್ರಿ ಕಾರ್ಣಿಕೋತ್ಸವದಲ್ಲಿ ಭವಿಷ್ಯವಾಣಿ ನುಡಿದ ಗೊರವಯ್ಯ.
- ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್ ಎಂದ ದೈವವಾಣಿ.
- ಸಾಧು-ಸಂತರೇ ದೇಶದ ಪ್ರಧಾನಿಯಾಗಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸುವ ಕಾಲ ಹತ್ತಿರ ಎಂದು ಭವಿಷ್ಯ

ಹಾವೇರಿ: ರಾಣೇಬೆನ್ನೂರು ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮಿಯ ನವರಾತ್ರಿ ಕಾರ್ಣಿಕೋತ್ಸವವು ಸಡಗರದಿಂದ ನೆರವೇರಿದ್ದು, ಈ ಬಾರಿ ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ದೈವವಾಣಿ ಮೊಳಗಿದೆ.
ಸಂಪ್ರದಾಯದಂತೆ ಸತತ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು, ಕರಿಯಾಲ್ ಕಟ್ಟಿಯಲ್ಲಿ 15 ಅಡಿ ಎತ್ತರದ ಬಿಲ್ಲನ್ನೇರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಈ ವರ್ಷದ ಭವಿಷ್ಯ ನುಡಿದರು.
ಅನ್ನದಾತನ ಮೊಗದಲ್ಲಿ ಮಂದಹಾಸ : ಕಾರ್ಣಿಕದ ನುಡಿಯು ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರಿಗೆ, ಹಿಂಗಾರು ಹಂಗಾಮಿನಲ್ಲಿ ವರುಣನ ಕೃಪೆ ಲಭಿಸಲಿದೆ. ಉತ್ತಮ ಮಳೆಯಾಗಿ ನಾಡು ಸಮೃದ್ಧವಾಗಲಿದ್ದು, ಅನ್ನದಾತನ ಸಂಕಷ್ಟಗಳು ದೂರವಾಗಲಿವೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ದೈವ ವಾಣಿ ಅರ್ಥವೇನು? : ಈ ಬಾರಿಯ ದೈವವಾಣಿಯು ದೇಶದ ರಾಜಕೀಯ ದಿಕ್ಕನ್ನು ಸೂಚಿಸುವಂತಿದೆ ಎಂಬ ಚರ್ಚೆ ಆರಂಭವಾಗಿದೆ. ಈ ಕುರಿತು ವಿಶ್ಲೇಷಿಸಿರುವ ದೇವಾಲಯದ ಪ್ರಧಾನ ಅರ್ಚಕ ಸಂತೋಷಭಟ್ಟ ಗುರೂಜಿ, “ಭವಿಷ್ಯದಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸಾಧು-ಸಂತರ ಪಾತ್ರ ನಿರ್ಣಾಯಕವಾಗಲಿದೆ. ಸಾಧು-ಸಂತರೇ ದೇಶದ ಪ್ರಧಾನಿಯಾಗಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸುವ ಕಾಲ ಸನ್ನಿಹಿತವಾಗಬಹುದು ಎಂಬುದರ ಮುನ್ಸೂಚನೆ ಇದಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿವರ್ಷವೂ ರಾಜ್ಯದ ಗಮನ ಸೆಳೆಯುವ ಮಾಲತೇಶ ದೇವರ ಈ ಕಾರ್ಣಿಕವು, ಅತ್ತ ಕೃಷಿ ಸಮೃದ್ಧಿ ಹಾಗೂ ಇತ್ತ ದೇಶದ ಮಹತ್ವದ ರಾಜಕೀಯ ಬದಲಾವಣೆಗಳ ದಿಕ್ಸೂಚಿಯಾಗಿ ಭಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
2025 ರ ಕಾರ್ಣಿಕ ನುಡಿ ಏನಾಗಿತ್ತು? : ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗೀತಲೇ ಪರಾಕ್ ಅಂದರೆ, ನಾಡಿನಾದ್ಯಂತ ಹಿಂಗಾರು ಮಳೆ ಸಮೃದ್ಧವಾಗಿ ಸುರಿದು, ಬೆಳೆಗಳು ಉತ್ತಮವಾಗಿ ಬರಲಿವೆ. ನಾಡಿಗೆ ಸುಭಿಕ್ಷೆ ಒದಗಿಬರಲಿದ್ದು, ರಾಜಕೀಯವಾಗಿ ಯಾವುದೇ ದೊಡ್ಡ ಅಸ್ಥಿರತೆ ಇರುವುದಿಲ್ಲ ಹಾಗೂ ಉತ್ತಮ ನಾಯಕರು ಹೊರಹೊಮ್ಮಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಅಂತೆಯೇ ಕಳೆದ ವರ್ಷ ಮಳೆ ಬೆಳೆ ಉತ್ತಮವಾಗಿತ್ತು.
2024ರ ಕಾರ್ಣಿಕ ಕಾರ್ಣಿಕ ನುಡಿ ‘ಆಕಾಶದತ್ತ ಚಿಗುರಿತಲೇ, ಬೇರು ಮುದ್ದಾತಲೇ ಪರಾಕ್’ ಎಂದಾಗಿದ್ದು, ‘ಆಕಾಶದತ್ತ ಚಿಗುರಿತು’ ಎಂದರೆ ಉತ್ತಮ ಮಳೆಯಾಗುವ ಸಂಕೇತ, ‘ಬೇರು ಮುದ್ದಾಯಿತು’ ಎಂದರೆ ರೈತರು ಬೆಳೆದ ಬೆಳೆಗೆ ಸಮೃದ್ಧ ಫಲ ದೊರೆತು ಅನ್ನದಾತನಿಗೆ ಆರ್ಥಿಕ ಲಾಭವಾಗಲಿದೆ ಎಂಬುದಾಗಿತ್ತು. ಈ ಭವಿಷ್ಯವೂ ನಿಜವಾಗಿತ್ತು.
