Stopping an immoral relationship: A woman watched YouTube with her lover, mixed poison into her food, and killed her husband by suffocating him! – ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಗೃಹಿಣಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಊಟಕ್ಕೆ ವಿಷ ಬೆರಸಿ, ಉಸಿರುಗಟ್ಟಿಸಿ ಪತಿಯನ್ನೇ ಕೊಂದಿರುವ ಘಟನೆ ಮೈಸೂರಿನ ಹುಣಸೂರು ತಾಲೂಕಿನ ವಿನೋಬ ಕಾಲೊನಿಯಲ್ಲಿ ನಡೆದಿದೆ. ಪತಿಯನ್ನು ಕೊಲೆ ಮಾಡಲು ಯೂಟ್ಯೂಬ್ನಲ್ಲಿ ದತ್ತೂರಿ ಬೀಜದ ಪುಡಿಯ ಬಗ್ಗೆ ಮಾಹಿತಿ ಪಡೆದಿದ್ದ ಪವಿತ್ರ, ಇಡ್ಲಿಯಲ್ಲಿ ವಿಷಕಾರಿ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಆದರೂ ಪತಿ ಸಾಯದಿದ್ದಾಗ ಪ್ರಿಯಕರ ಸುನೀಲ್ ಜತೆ ಸೇರಿ ಕತ್ತು ಹಿಸುಕಿ ಸಾಯಿಸಿ, ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಲ್ಲದೆ ಪೊಲೀಸರಿಗೂ ತಿಳಿಸಿದ್ದಾರೆ. ಆದರೆ, ಮೃತನ ಸಹೋದರನ ದೂರಿನಿಂದ ನಡೆದ ತನಿಖೆಯಲ್ಲಿ ಸತ್ಯ ಬಯಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
- ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಊಟದಲ್ಲಿ ವಿಷ ಹಾಕಿ, ಉಸಿರುಗಟ್ಟಿಸಿ ಪತಿ ಕೊಂದ ಪತ್ನಿ
- ಕೊಲೆ ಮಾಡಲು ಪ್ಲಾನ್ ಬಗ್ಗೆ ಯೂಟ್ಯೂಬ್ ನೋಡಿ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ ಪತ್ನಿ, ಪ್ರಿಯಕರ ಅರೆಸ್ಟ್
- ಮೃತನ ಸಹೋದರ ದೂರಿನ ಮೇರೆಗೆ ನಡೆದ ತನಿಖೆಯಲ್ಲಿ ಸತ್ಯ ಬಾಯ್ಬಿಟ್ಟ ಖತರ್ನಾಕ್ ಜೋಡಿ.

ಹುಣಸೂರು: ಅನೈತಿಕ ಸಂಬಂಧ ಬಯಲಾಗುವ ಆತಂಕದಿಂದ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಲಾಗಿದೆ. ಯೂಟ್ಯೂಬ್ನಲ್ಲಿ ಹುಡುಕಾಡಿ ದತ್ತೂರಿ ಬೀಜದ ಪುಡಿಯ ಬಗ್ಗೆ ಮಾಹಿತಿ ಪಡೆದಿದ್ದ ಗೃಹಿಣಿ, ಪ್ರಿಯಕರನೊಂದಿಗೆ ಸೇರಿ ಪತಿಗೆ ಇಡ್ಲಿಯಲ್ಲಿ ವಿಷಕಾರಿ ಪುಡಿ ಬೆರೆಸಿ ತಿನ್ನಿಸಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ವಿನೋಬ ಕಾಲೊನಿಯಲ್ಲಿ ನಡೆದಿದೆ.
ಗ್ರಾಮದ ನಾಗಯ್ಯ ಅವರ ಪುತ್ರ, ಗಾರೆ ಕೆಲಸಗಾರ ರಾಮಪ್ರಸಾದ್ (35) ಕೊಲೆಯಾದವರು. ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ, ಅದೇ ಗ್ರಾಮದ ಸುನೀಲ್ ಬಂಧಿತ ಆರೋಪಿಗಳು. ದಂಪತಿಗೆ 11 ವರ್ಷದ ಮೋಕ್ಷಿತ್ ಹಾಗೂ 9 ವರ್ಷದ ಸಮೀಕ್ಷಾ ಎಂಬ ಇಬ್ಬರು ಮಕ್ಕಳಿದ್ದಾರೆ.
12 ವರ್ಷಗಳ ದಾಂಪತ್ಯ : ರಾಮಪ್ರಸಾದ್ ಅವರು 12 ವರ್ಷಗಳ ಹಿಂದೆ ಮೈಸೂರಿನ ಕೆಸರೆಯ ರವಣಯ್ಯ ಅವರ ಪುತ್ರಿ ಪವಿತ್ರಳನ್ನು ವಿವಾಹವಾಗಿದ್ದರು. ರಾಮಪ್ರಸಾದ್ ಅವರ ಹತ್ತಿರದ ಸಂಬಂಧಿಯಾಗಿರುವ ಸುನೀಲ್ ಅವಿವಾಹಿತನಾಗಿದ್ದು, ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಈತ ಪವಿತ್ರಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿ ಬದುಕಿದ್ದರೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ರಾಮಪ್ರಸಾದ್ನನ್ನು ಕೊಲೆ ಮಾಡಲು ಪವಿತ್ರ ಹಾಗೂ ಸುನೀಲ್ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅ. 16ರಂದು ಕುಡಿದು ಮನೆಗೆ ಬಂದಿದ್ದ ರಾಮಪ್ರಸಾದ್ಗೆ ಪವಿತ್ರ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಳು. ರಾಮಪ್ರಸಾದ್ ರಾತ್ರಿ ಸಾಯದಿದ್ದಾಗ ಆರೋಪಿಗಳು, ಕತ್ತು ಹಿಸುಕಿ ಉಸಿರುಗಟ್ಟಿಸಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ರಾತ್ರಿ 11ರ ಸುಮಾರಿಗೆ ಪವಿತ್ರ, ರಾಮಪ್ರಸಾದ್ ಅವರ ಸಹೋದರ ಚಂದ್ರಹಾಸನಿಗೆ ಕರೆ ಮಾಡಿ, ಮೊಸರನ್ನ ತಿಂದು ಮಲಗಿದ್ದ ಪತಿ ಏಳುತ್ತಿಲ್ಲ ಎಂದು ತಿಳಿಸಿದ್ದಳು. ಕೂಡಲೇ ಮನೆಗೆ ಬಂದ ಚಂದ್ರಹಾಸ, ಅಸ್ವಸ್ಥಗೊಂಡಿದ್ದ ರಾಮಪ್ರಸಾದ್ ಅವರನ್ನು ಹುಣಸೂರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಕೊಲೆ ಬಳಿಕ ತಾನೇ ಪೊಲೀಸರಿಗೆ ದೂರ ನೀಡಿದ್ದ ಪತ್ನಿ : ಪವಿತ್ರಳೇ ಪೊಲೀಸರಿಗೆ ದೂರು ನೀಡಿದ್ದಳು. ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದ್ದರು. ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ, ರಾಮಪ್ರಸಾದ್ ಸಾವಿನ ಕುರಿತು ಗ್ರಾಮದಲ್ಲಿ ಚರ್ಚೆ ನಡೆದಿತ್ತು. ಘಟನೆ ನಡೆದ ರಾತ್ರಿ 9.30ರ ಸುಮಾರಿಗೆ ಸುನೀಲ್ ಮನೆಗೆ ಬಂದಿದ್ದನ್ನು ಅಕ್ಕಪಕ್ಕದವರು ಗಮನಿಸಿದ್ದರು. ಅಲ್ಲದೆ, ಪವಿತ್ರ ಹಾಗೂ ಸುನೀಲ್ ನಡುವಿನ ಸಂಬಂಧದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಚಂದ್ರಹಾಸ, ತಮ್ಮನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪವಿತ್ರ ಹಾಗೂ ಸುನೀಲ್ ವಿರುದ್ಧ ದೂರು ನೀಡಿದ್ದರು.
ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಯೂಟ್ಯೂಬ್ನಲ್ಲಿ ಹುಡುಕಾಟ : ಪತಿಯನ್ನು ಹೇಗೆ ಕೊಲೆ ಮಾಡಬಹುದು ಎಂಬುದರ ಕುರಿತು ಪವಿತ್ರ ಹಾಗೂ ಸುನೀಲ್ ಯೂಟ್ಯೂಬ್ನಲ್ಲಿ ಹುಡುಕಾಟ ನಡೆಸಿದ್ದರು. ದತ್ತೂರಿ ಬೀಜದ ಪುಡಿಯನ್ನು ಆಹಾರದಲ್ಲಿ ಬೆರೆಸಿ ತಿನ್ನಿಸಿದರೆ ಸಾವು ಸಂಭವಿಸಬಹುದು ಎಂಬ ಮಾಹಿತಿ ಆಧರಿಸಿ ಕೃತ್ಯಕ್ಕೆ ಮುಂದಾಗಿದ್ದರು. ಆದರೆ, ಪುಡಿ ಬೆರೆಸಿದ ಇಡ್ಲಿ ತಿಂದ ಬಳಿಕ ರಾಮಪ್ರಸಾದ್ ಅಸ್ವಸ್ಥಗೊಂಡಿದ್ದರೂ ಮೃತಪಟ್ಟಿರಲಿಲ್ಲ. ಇದರಿಂದ ಆತಂಕಗೊಂಡ ಆರೋಪಿಗಳು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
