Social Media Post: No need to file FIRs just because you get caught – High Court issues 5 guidelines to Karnataka Police – High Court guidelines to Karnataka Police : ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ಆಧರಿಸಿ, ಬಂಧನ ಮಾಡುವಂತಿಲ್ಲ ಜೊತೆಗೆ, ಎಫ್ಐಆರ್ ದಾಖಲಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್, ರಾಜ್ಯ ಗೃಹ ಇಲಾಖೆಗೆ ಸೂಚಿಸಿದೆ. ಜೊತೆಗೆ, 5 ಅಂಶಗಳಿರುವ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿ, ಇದನ್ನು ಅನುಸರಿಸುವಂತೆ ಸೂಚಿಸಿದೆ. ಸೋಶಿಯಲ್ ಮೀಡಿಯಾದ ಪೋಸ್ಟ್ ಆಧರಿಸಿ, ಒಬ್ಬರ ಮೇಲೆ ಏಳು ಎಫ್ಐಆರ್ ಅನ್ನು ದಾಖಲಿಸಲಾಗಿತ್ತು.
- ಕರ್ನಾಟಕ ಪೋರ್ಟ್ ಫೋಲಿಯೋ ಎನ್ನುವ ಎಕ್ಸ್ ಖಾತೆಯ ಅಡ್ಮಿನ್ ವಿರುದ್ದ ದಾಖಲಾಗಿದ್ದ ಎಫ್ಐಆರ್.
- ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದ ಕೋರ್ಟ್.
- ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಐದು ಮಾರ್ಗಸೂಚಿಗಳು, ಪ್ರಾಥಮಿಕ ತನಿಖೆ ಅಗತ್ಯ ಎಂದ ಕೋರ್ಟ್.

ಯಾವ ಪ್ರಕರಣವನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎನ್ನುವಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ, ಅವರನ್ನು ಫಾಲೋ ಮಾಡಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಪುತ್ತೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿಯನ್ನು ’ಕರ್ನಾಟಕ ಪೋರ್ಟ್ ಫೋಲಿಯೋ’ ಎನ್ನುವ ಎಕ್ಸ್ ಖಾತೆ ರಿಪೋಸ್ಟ್ ಮಾಡಿತ್ತು. ಇದಕ್ಕಾಗಿ, ಇವರ ಈ ಹ್ಯಾಂಡಲಿನ ಅಡ್ಮಿನ್ ವಿರುದ್ದ ಎಫ್ಐಆರ್ ದಾಖಲಾಗಿತ್ತು.
ಪ್ರತಿವಾದಿಗಳು, ಇವರು ಸುಳ್ಳು ಮಾಹಿತಿಯನ್ನು ಹರಡುತ್ತಾ, ಕೋಮುದ್ವೇಷಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಅವರ (ಕರ್ನಾಟಕ ಪೋರ್ಟ್ ಫೋಲಿಯೋ) ಮೇಲೆ, BNS 353(2) ಅಡಿಯಲ್ಲಿ ದೂರು ದಾಖಲಾಗಿತ್ತು. ಆದರೆ, ಪ್ರತಿವಾದಿಗಳ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಯಿಲ್ಲ ಮತ್ತು ಮತ್ತು ದುರುದ್ದೇಶ ಸಾಬೀತಾಗಿಲ್ಲ ಎಂದು ಹೈಕೋರ್ಟ್, ಎಫ್ಐಆರ್ ಅನ್ನು ರದ್ದುಗೊಳಿಸಿತ್ತು. ಈ ಕೇಸಿನ ವಿಚಾರಣೆಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್, ಮಾರ್ಗಸೂಚಿಯನ್ನು ಹೊರಡಿಸಿದೆ. ಜೊತೆಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಈ ಮಾರ್ಗಸೂಚಿಯನ್ನು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆಯ ಮುಖಾಂತರ ತಲುಪಿಸಿ ಎಂದು ಸೂಚಿಸಿದೆ.
ಪೊಲೀಸ್ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ 5 ಮಾರ್ಗಸೂಚಿಗಳು ಏನು?
ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟಿನ ಸತೇಂದರ್ ಕುಮಾರ್ ಅಂಟಿಲ್ ಮತ್ತು ತೆಲಂಗಾಣ ಹೈಕೋರ್ಟಿನ ಬಾಲು ಪ್ರಕರಣವನ್ನು ಉಲ್ಲೇಖಿಸಿ, ಕರ್ನಾಟಕ ಹೈಕೋರ್ಟ್ ಐದು ಮಾರ್ಗಸೂಚಿಯನ್ನು ಹೊರಡಿಸಿದೆ. ಏನು ಆ ಐದು ಮಾರ್ಗಸೂಚಿಗಳು?
- 1. ಅಪರಾಧದ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ : ಆರೋಪ ಎದುರಾದ ಕೂಡಲೇ ಕ್ರಮ ತೆಗೆದುಕೊಳ್ಳದೇ, ಮೊದಲು, ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಿ, ಏನು ಆರೋಪ ಮಾಡಲಾಗಿದೆಯೋ, ಆ ಅಪರಾಧದ ಅಂಶಗಳಿವೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಶಿಕ್ಷಾರ್ಹ ಕಾಯಿದೆಯ ನಿಯಮಗಳನ್ನು ನಕಲು ಮಾಡಬೇಡಿ.
- 2. ಸತತ FIRಗಳನ್ನು ಪರಿಶೀಲಿಸಿ : ಒಂದೇ, ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ದೂರು ದಾಖಲಾಗಿದ್ದರೆ, ಮತ್ತೊಂದು ಹೊಸ ಎಫ್ಐಆರ್ ದಾಖಲಿಸಬಾರದು. ದೂರುದಾರರು ಬೇರೆಯವರು ಆಗಿದ್ದರೂ, ಮತ್ತೊಂದು FIR ದಾಖಲಿಸಬಾರದು.
- 3. ಮೊದಲು ಪ್ರಾಥಮಿಕ ತನಿಖೆ : ಯಾವುದೇ ಬಂಧನ ಅಥವಾ ಎಫ್ಐಆರ್ ದಾಖಲಿಸುವ ಮುನ್ನ, BNSS 173(3) ಅಡಿಯಲ್ಲಿ, ಅವಕಾಶ ಇರುವ ಕಡೆ, ಪ್ರಾಥಮಿಕ ತನಿಖೆಯನ್ನು ನಡೆಸುವುದಕ್ಕೆ ಆದ್ಯತೆಯನ್ನು ನೀಡಬೇಕು.
- 4. ಕೇವಲ ಟೀಕೆ ಬಂಧನ/ ಎಫ್ಐಆರ್’ಗೆ ಕಾರಣವಾಗಬಾರದು : BNS 353(2) ಅನ್ವಯವಾಗುವಂತೆ, ಪೋಸ್ಟಿನ ನೈಜ ಉದ್ದೇಶ ಸೇರಿದಂತೆ ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಬೇಕು. ಕೇವಲ ಟೀಕೆ ಟಿಪ್ಪಣಿಯನ್ನು ಈ ಕಾಯಿದೆಯಡಿಯಲ್ಲಿ ತರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಾಗಲಿ.
- 5. ಮೊದಲು ನೋಟಿಸ್ ನೀಡಿ ವಿಚಾರಣೆ ಮಾಡಿ : BNS 35 ಮತ್ತು ಅರ್ನೇಶ್ ಕುಮಾರ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಬಂಧನದ ಅಗತ್ಯ ಇಲ್ಲದೇ ಇದ್ದಲ್ಲಿ ಸೆಕ್ಷನ್ 35(3) ನೋಟಿಸ್ ನೀಡಿ ವಿಚಾರಣೆಯನ್ನು ನಡೆಸಬಹುದು. ಎಫ್ಐಆರ್ ದಾಖಲಾದ ಕೂಡಲೇ, ಬಂಧಿಸುವಂತಿಲ್ಲ.
