The charm of the “Adhyaksha” fame Sharan-Heba Patel duo; ‘Rama Rasa’ gets a ‘Ruiya Ruiya Rama Rasa’ polish! The title song will give a twist to the story of the film; Vijay Prakash’s singing is appreciated – ಜೀ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ಬಹುನಿರೀಕ್ಷಿತ ‘ರಾಮ ರಸ’ ಚಿತ್ರದ ‘ರುಯ್ಯ ರುಯ್ಯ ರಾಮರಸ’ ಶೀರ್ಷಿಕೆ ಗೀತೆ ಸೆವೆನ್ ಸ್ಟಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಪುನೀತ್ ರಂಗಸ್ವಾಮಿ ಸಾಹಿತ್ಯ, ಬಿ.ಜೆ. ಭರತ್ ಸಂಗೀತ ಹಾಗೂ ವಿಜಯ್ ಪ್ರಕಾಶ್ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಶರಣ್, ಹೆಬಾ ಪಟೇಲ್ ಹಾಗೂ ಕಾರ್ತಿಕ್ ಮಹೇಶ್ ಅಭಿನಯಿಸಿದ್ದಾರೆ. ‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್ ಮತ್ತು ಹೇಬಾ ಪಟೇಲ್ ಮತ್ತೆ ಈ ಹಾಡಿನಲ್ಲಿ ಅಭಿನಯಿಸಿರುವುದು ವಿಶೇಷ.
ಕಥೆಗೆ ತಿರುವು ನೀಡುವ ಹಾಡು
ನಿರ್ದೇಶಕ ಬಿ.ಎಂ. ಗಿರಿರಾಜ್ ಮಾತನಾಡಿ, “ಚಿತ್ರದ ಆರಂಭದಿಂದಲೂ ಈ ಹಾಡಿನ ಬಗ್ಗೆ ಇಡೀ ತಂಡಕ್ಕೆ ವಿಶೇಷ ವ್ಯಾಮೋಹವಿದೆ. ಹಾಡು ಗೆಲ್ಲುವ ವಿಶ್ವಾಸವಿದ್ದು, ಚಿತ್ರದ ಕಥೆಗೆ ಮಹತ್ವದ ತಿರುವು ನೀಡಲಿದೆ. ಬಿ.ಜೆ. ಭರತ್ ಅವರ ಸಂಗೀತ, ವಿಜಯ್ ಪ್ರಕಾಶ್ ಗಾಯನ ಹಾಗೂ ಪುನೀತ್ ರಂಗಸ್ವಾಮಿ ಸಾಹಿತ್ಯ ಹಾಡಿನ ಮೆರುಗು ಹೆಚ್ಚಿಸಿವೆ. ‘ರಾಮ ರಸ’ದ ಒಳಾರ್ಥವನ್ನು ಪ್ರೇಕ್ಷಕರು ಚಿತ್ರದಲ್ಲೇ ತಿಳಿಯಬೇಕು” ಎಂದರು.
ಶರಣ್–ಹೆಬಾ ಜೋಡಿ ಮತ್ತೆ ಈ ಹಾಡಿನಲ್ಲಿ ಅಭಿನಯಿಸಿರುವುದು ವಿಶೇಷ
ನಿರ್ಮಾಪಕ ಹಾಗೂ ಕ್ರಿಯೇಟಿವ್ ಹೆಡ್ ಗುರು ದೇಶಪಾಂಡೆ ಮಾತನಾಡಿ, “ಕಥೆ ಮತ್ತು ಸನ್ನಿವೇಶಕ್ಕೆ ಈ ಹಾಡು ಅಗತ್ಯವಾಗಿತ್ತು. ಪುನೀತ್ ರಂಗಸ್ವಾಮಿ ಉತ್ತಮ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಸುಮಧುರವಾಗಿ ಹಾಡಿದ್ದಾರೆ. ಶರಣ್ ಅವರೊಂದಿಗೆ ಹತ್ತು ವರ್ಷಗಳಿಗೂ ಹೆಚ್ಚಿನ ಸ್ನೇಹವಿದೆ. ಶರಣ್ ಹಾಗೂ ಹೇಬಾ ಪಟೇಲ್ ಈ ಹಾಡಿನಲ್ಲಿ ಅಭಿನಯಿಸಬೇಕೆಂಬುದು ನನ್ನ ಆಸೆಯಾಗಿತ್ತು. ಮುರಳಿ ಮಾಸ್ಟರ್ ಅದ್ಭುತ ನೃತ್ಯ ಸಂಯೋಜನೆ ಮಾಡಿದ್ದಾರೆ”. ತಮ್ಮ ಚಿತ್ರಗಳಿಗೆ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಧ್ರುವ ಸರ್ಜಾ ಮುಂತಾದ ಚಿತ್ರರಂಗದ ಗಣ್ಯರು ನೀಡಿದ ಬೆಂಬಲವನ್ನು ಸ್ಮರಿಸಿದರು. ದರ್ಶನ್ ಅವರೆ ಬಂದು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವಂತೆ ಆಗಲಿ. ಪ್ರೇಕ್ಷಕರ ಪ್ರೋತ್ಸಾಹ ಸದಾ ಇರಲಿ ಎಂದರು.
ಹಾಡು ಚೆನ್ನಾಗಿದೆ. ಹಾಡಿನಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ :
ನಟ ಶರಣ್ ಮಾತನಾಡಿ, “ಪೋಷಕ ಕಲಾವಿದನಾಗಿ ಒಂಬತ್ತು ವರ್ಷಗಳಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾದ ಬಳಿಕ ಸುಮಾರು ಹದಿನೈದು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದೇನೆ. ನಾಯಕನಾದರೆ ಒಂದೇ ಸಿನಿಮಾಗೆ ಹೆಚ್ಚು ಸಮಯ ನೀಡ ಬೇಕಾಗುತ್ತದೆ. ‘ಅಧ್ಯಕ್ಷ’ ಚಿತ್ರದ ಬಳಿಕ ಹೆಬಾ ಪಟೇಲ್ ಜೊತೆ ಮತ್ತೆ ನಟಿಸಿರುವುದು ಸಂತೋಷ ತಂದಿದೆ. ಆ ಚಿತ್ರದ ಹಾಡಿಗೂ ವಿಜಯ್ ಪ್ರಕಾಶ್ ಅವರೇ ಧ್ವನಿಯಾಗಿದ್ದರು. ಗುರುದೇಶಪಾಂಡೆ ಹಾಗೂ ಗಿರಿರಾಜ್ ನನ್ನ ಬಹುದಿನಗಳ ಸ್ನೇಹಿತರು. ಹಾಡಿನಂತೆ ಚಿತ್ರವೂ ಯಶಸ್ಸು ಕಾಣಲಿ” ಎಂದು ಹಾರೈಸಿದರು.
ಹೆಬಾ ಪಟೇಲ್ ಮಾತನಾಡಿ, “‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್ ಅವರೊಂದಿಗೆ ಅಭಿನಯಿಸಿರುವುದು ಸಂತೋಷ ತಂದಿದೆ. ಹಾಡು ಚೆನ್ನಾಗಿ ಮೂಡಿಬಂದಿದ್ದು, ‘ರಾಮ ರಸ’ ಚಿತ್ರ ಯಶಸ್ಸು ಕಾಣಲಿ” ಎಂದು ಹಾರೈಸಿದರು.
ಶರಣ್ ಜೊತೆ ನಟಿಸುವ ಆಸೆ ಈಡೇರಿತು:
ನಟ ಕಾರ್ತಿಕ್ ಮಹೇಶ್ ಮಾತನಾಡಿ, “ಶರಣ್ ಅವರೊಂದಿಗೆ ನಟಿಸುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಆರಂಭದಲ್ಲಿ ಈ ಹಾಡಿನಲ್ಲಿ ನಾನು ನಟಿಸುತ್ತಿಲ್ಲ ಎಂದು ತಿಳಿದಾಗ ಬೇಸರವಾಯಿತು. ಬಳಿಕ ನಾನೂ ಅಭಿನಯಿಸುತ್ತಿದ್ದೇನೆ ಎಂದು ಗುರುದೇಶಪಾಂಡೆ ಅವರು ತಿಳಿಸಿದಾಗ ತುಂಬಾ ಸಂತೋಷವಾಯಿತು. ಹಾಡು ಚೆನ್ನಾಗಿ ಮೂಡಿಬಂದಿದೆ” ಎಂದರು.
ನಿರ್ಮಾಪಕ ವಿಕ್ರಂ ಆರ್ಯ ಮಾತನಾಡಿ, “ಹಾಡು ಉತ್ತಮವಾಗಿ ಮೂಡಿಬಂದಿದೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದ್ದು, ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.
ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಂಗೀತ ನಿರ್ದೇಶಕ ಬಿ.ಜೆ. ಭರತ್ , ಹಾಡು ಬರೆದಿರುವ ಪುನೀತ್ ರಂಗಸ್ವಾಮಿ ಹಾಗೂ ಛಾಯಾಗ್ರಾಹಕ ಕೃಷ್ಣ ಕುಮಾರ್ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಡಿನ ಕುರಿತು ಮಾತನಾಡಿದರು. ಕನ್ನಡ ಚಿತ್ರರಂಗದ ಹಲವು ಪ್ರಸಿದ್ಧ ನೃತ್ಯ ನಿರ್ದೇಶಕರು ಹಾಗೂ ನಟಿ ಪಾಯಲ್ ಚಂಗಪ್ಪ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

