BNDP NIGAMA WEBSITE LAUNCH: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ನೂತನ ವೆಬ್ ಸೈಟ್ಗೆ ಸಚಿವ ಯು.ಟಿ.ಖಾದರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ 
ಬೆಂಗಳೂರು, ನ.5: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗೆ ಅನುಕೂಲವಾಗುವ ಅಧಿಕೃತ ಜಾಲತಾಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಂದುಳಿದ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ರಾಜ್ಯ ಸರ್ಕಾರ ಹಲವು ನಿಗಮಗಳನ್ನು ಸ್ಥಾಪಿಸಿದೆ. ಇವುಗಳ ಮೂಲಕ ಅನೇಕ ಯೋಜನೆಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಇನ್ನೂ ಹೆಚ್ಚಿನ ಅಗತ್ಯ ಅನುದಾನವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿಗಮ ಅಧ್ಯಕ್ಷ ಮಂಜುನಾಥ್ ಪೂಜಾರಿ ಮಾತನಾಡಿ, ನಿಗಮದಿಂದ ವಿವಿಧ ಯೋಜನೆಗಳಿಗೆ ನವೆಂಬರ್ 15ರಿಂದ ನಿಗಮದ ನೂತನ ಜಾಲತಾಣ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ನಾಲ್ಕು ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದ್ದು, ದೇವರಾಜು ಅರಸು ಅಭಿವೃದ್ಧಿ ನಿಗಮದ “ವಿಶ್ವಾಸ್’ ಆಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 120, ಅರಿವು ಶೈಕ್ಷಣಿಕ ಸಾಲ ಯೋಜನೆ 100, ಗಂಗಾ ಕಲ್ಯಾಣ ಯೋಜನೆ 70, ಸ್ವಾವಲಂಬಿ ಸಾರಥಿ ಯೋಜನೆ, 62 ಫಲಾನುಭವಿಗಳನ್ನು ಆಯ್ಕೆ ಮಾಡುವ ಭೌತಿಕ ಗುರಿ ಹೊಂದಲಾಗಿದೆ. ಈಗಾಗಲೇ ಸರ್ಕಾರ ನೀಡಿರುವ 10 ಕೋಟಿ ರೂಪಾಯಿ ಅನುದಾನದಲ್ಲಿ 3.50ಕೋಟಿ ಮೊತ್ತದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಜನವರಿ 1ರೊಳಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು. ಜಿಲ್ಲೆಗೆ ಮೂರರಿಂದ 4, ಎರಡರಿಂದ ಮೂರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ನಿಗಮಕ್ಕೆ ನೂರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಿಗಮದ ಮೂಲಕ ಕೆಎಂಎಫ್ ನಂದಿನಿ ಬೂತ್ ಮಾದರಿಯಲ್ಲಿ ಸೇಂದಿ ಉತ್ಪನ್ನಗಳನ್ನು ಮಾರಾಟ ಮಾಡುವ ನೂತನ ಯೋಜನೆ ಜಾರಿ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದರಿಂದ ಸೇಂದಿ ಮಾರಾಟದಿಂದ ಉದ್ಯೋಗ ಕಳೆದುಕೊಂಡಿರುವ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮನವಿ ಮಾಡಲಾಗುವುದು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಧಾಕರ್ ಮಾತನಾಡಿ, ಇದೇ ತಿಂಗಳ 27ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಒಕ್ಕೂಟ ಸಮಾವೇಶದಲ್ಲಿ ನಿಗಮಕ್ಕೆ 100ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ತುರುವಿಹಾಳ, ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಭರ್ಮಪಣ್ಣ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ದೇವರಾಜು ಅರಸು ಅಭಿವೃದ್ಧಿ ನಿಗಮ ಹಣಕಾಸು ಪ್ರಧಾನ ವ್ಯವಸ್ಥಾಪಕಿ ಪ್ರೀತಿ ವರ್ಣೇಕರ್ ಉಪಸ್ಥಿತರಿದ್ದರು.
