“I can’t stay here; it feels like hell” — Pavitra Gowda in tears; actor Darshan tells her to “just hold on for another 4 months.” – ಕೋರ್ಟ್ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಕಡಿತಗೊಂಡಾಗ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿಕೊಂಡಿದ್ದಾರೆ. ದರ್ಶನ್ ಬೆನ್ನು ನೋವಿನ ಬಗ್ಗೆ ವಿಚಾರಿಸಿದ ಪವಿತ್ರಾ, “ಜೈಲು ನರಕದಂತಿದೆ, ಇಲ್ಲಿರಲು ಆಗುತ್ತಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ದರ್ಶನ್, “ಇನ್ನೂ 4-5 ತಿಂಗಳು ಧೈರ್ಯವಾಗಿರು, ಮನಸ್ಸು ಗಟ್ಟಿ ಮಾಡಿಕೋ” ಎಂದು ಸಾಂತ್ವನ ಹೇಳಿದ್ದಾರೆ. ಸಂಪರ್ಕ ಮರುಸ್ಥಾಪನೆಯಾಗುತ್ತಿದ್ದಂತೆ ಇಬ್ಬರೂ ದಿಢೀರ್ ಮೌನಕ್ಕೆ ಶರಣಾಗಿದ್ದಾರೆ.
- ಇಲ್ಲಿರೋಕೆ ಆಗ್ತಿಲ್ಲ, ನರಕ ಅನಿಸ್ತಿದೆ’ ಎಂದು ಕಣ್ಣೀರಿಟ್ಟ ಪವಿತ್ರಾ ಗೌಡ.
- ಧೈರ್ಯ ತುಂಬಿದ ನಟ ದರ್ಶನ್; ಇನ್ನೂ 4 ತಿಂಗಳು ತಡೆದುಕೋ ಎಂದು ಧೈರ್ಯ ತುಂಬಿದರು.
- ವಿಚಾರಣೆಯ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ (ವಿಸಿ) ಸಂಪರ್ಕದಲ್ಲಿ ಉಂಟಾದ ತಾಂತ್ರಿಕ ಲೋಪದ ವೇಳೆ ಇಬ್ಬರ ಮಾತುಕತೆ.

‘ಬೆನ್ನು ಮುರಿದುಹೋಗಿದೆ’: ನೋವು ತೋಡಿಕೊಂಡ ನಟ :
ಸ್ಕ್ರೀನ್ನಲ್ಲಿ ದರ್ಶನ್ ಕಾಣಿಸುತ್ತಿದ್ದಂತೆ ಮಾತನಾಡಿಸಿದ ಪವಿತ್ರಾ, “ಊಟ ಆಯ್ತಾ? ಬೆನ್ನು ನೋವು ಹೇಗಿದೆ ಈಗ? ಫಿಸಿಯೋಥೆರಪಿ ಶುರುವಾಯ್ತಾ, ಎಷ್ಟು ದಿನ ಮಾಡಿಸಬೇಕು?” ಎಂದು ಕಾಳಜಿಯಿಂದ ವಿಚಾರಿಸಿದ್ದಾರೆ. ಇದಕ್ಕೆ ಅಸಹಾಯಕತೆಯಿಂದಲೇ ಉತ್ತರಿಸಿದ ದರ್ಶನ್, “ಬೆನ್ನು ಪೂರ್ತಿ ಮುರಿದು ಹೋದ ಅನುಭವವಾಗುತ್ತಿದೆ, ವಿಪರೀತ ಯಾತನೆ ಇದೆ. ಸದ್ಯಕ್ಕೆ ಒಂದೇ ಒಂದು ಸೆಷನ್ ಫಿಸಿಯೋಥೆರಪಿ ಮುಗಿದಿದೆ, ಇನ್ನು ಹಲವು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಿದೆ” ಎಂದಿದ್ದಾರೆ.
‘ಇಲ್ಲಿರಲು ಸಾಧ್ಯವೇ ಇಲ್ಲ, ನರಕಯಾತನೆ ಆಗ್ತಿದೆ’ :
ಇದೇ ವೇಳೆ ಕಣ್ಣೀರು ಹಾಕಿದ ಪವಿತ್ರಾ ಗೌಡ, “ನಾವಿನ್ನು ಎಷ್ಟು ಕಾಲ ಈ ಜೈಲಿನಲ್ಲೇ ದಿನ ಕಳೆಯಬೇಕು? ನನಗೆ ಇಲ್ಲಿ ಒಂದಿಷ್ಟೂ ಇರಲು ಸಾಧ್ಯವಾಗುತ್ತಿಲ್ಲ, ಜೀವನ ನರಕದಂತಾಗಿದೆ” ಎಂದು ಗೋಳು ತೋಡಿಕೊಂಡಿದ್ದಾರೆ. ಪವಿತ್ರಾ ಅವರ ಈ ಮಾತಿಗೆ ಕೈ ಸನ್ನೆ ಮೂಲಕವೇ ‘4’ ಎಂದು ಸಮಾಧಾನಪಡಿಸಲು ಯತ್ನಿಸಿದ ದರ್ಶನ್, “ಇನ್ನೂ ಕೇವಲ 4 ರಿಂದ 5 ತಿಂಗಳು ಹೇಗಾದರೂ ತಡೆದುಕೋ. ಮುಂದುವರಿದು, “ಇಷ್ಟು ತಿಂಗಳು ಕಷ್ಟಪಟ್ಟಿದ್ದೀಯಾ, ಇನ್ನ ನಾಲ್ಕು ತಿಂಗಳು ಮನಸ್ಸನ್ನು ಕಲ್ಲು ಮಾಡಿಕೋ, ಮಾನಸಿಕವಾಗಿ ಧೃತಿಗೆಡಬೇಡ” ಎಂದು ಪವಿತ್ರಾಗೆ ಧೈರ್ಯ ತುಂಬಿದ್ದಾರೆ.
ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಈ ಆಪ್ತ ಮಾತುಕತೆ ತೀವ್ರಗೊಳ್ಳುತ್ತಿದ್ದಂತೆಯೇ, ಅತ್ತ ತಾಂತ್ರಿಕ ದೋಷ ಸರಿಹೋಗಿ ವಿಡಿಯೋ ಕಾನ್ಫರೆನ್ಸ್ ಲೈವ್ ಮರುಸಂಪರ್ಕಗೊಂಡಿದೆ. ಪರದೆಯ ಮೇಲೆ ನ್ಯಾಯಾಲಯದ ಪ್ರಕ್ರಿಯೆಗಳು ಮರಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಇಬ್ಬರೂ ಆರೋಪಿಗಳು, ತಕ್ಷಣವೇ ಚರ್ಚೆಯನ್ನು ನಿಲ್ಲಿಸಿ ಎಂದಿನಂತೆ ಗಂಭೀರ ಮೌನಕ್ಕೆ ಜಾರಿದ್ದಾರೆ.
