ಚಿಕ್ಕಮಗಳೂರು : ಬಹುತೇಕರು ಸೆಲ್ಫಿ ಅಂದರೆ ಸಾಕು ಎಲ್ಲಿ ಬೇಕಾದರು ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ಸೆಲ್ಫಿಗಾಗಿ ಹಲವರು ಜೀವವನ್ನೇ ಕಳೆದುಕೊಂಡಿರುವ ಉದಾಹರಣೆಗಳಿವೆ. ಹೀಗಿದ್ದರು ಕೆಲವರು ಹುಚ್ಚಾಟ ಮೆರೆಯುತ್ತಾರೆ. ಇಂತಹದೇ ಒಂದು ಘಟನೆ ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿಯಲ್ಲಿ ನಡೆದಿದ್ದು, ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಬೇಕಾದ ಶಿಕ್ಷಕನೇ ಸೆಲ್ಫಿಗಾಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಪ್ರಸಿದ್ಧ ಪ್ರವಾಸಿ ತಾಣದ ವೀವ್ ಪಾಯಿಂಟ್ನಲ್ಲಿ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ನೂರಾರು ಅಡಿ ಆಳದ ಪ್ರಪಾತಕ್ಕೆ ಕಾಲು ಜಾರಿ ಬಿದ್ದು ಗಂಡ ಮೃತಪಟ್ಟಿರುವಂತಹ ಘಟನೆ ಕೆಮ್ಮಣ್ಣುಗುಂಡಿಯಲ್ಲಿ ನಡೆದಿದೆ. ಸಂತೋಷ್ (40) ಮೃತ ವ್ಯಕ್ತಿ. ಸಂತೋಷ್ ಶಿಕ್ಷಕರಾಗಿದ್ದರು. ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಶಿಕ್ಷಕ ಸಂತೋಷ್ ಮತ್ತು ಹೆಂಡತಿ ಶ್ವೇತ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ನೋಡಲು ಶನಿವಾರ ಬಂದಿದ್ದರು. ಕೆಮ್ಮಣ್ಣುಗುಂಡಿ ಪಾರ್ಕ್ ವೀಕ್ಷಣೆ ಮಾಡಿದ ದಂಪತಿ, ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್ ಬಳಿ ಹೋಗಿದ್ದಾರೆ.ಪ್ರಕೃತಿ ಸೌಂದರ್ಯದ ನಡುವೆ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಸಂತೋಷ್ ಮುಂದಾಗಿದ್ದರು. ಪ್ರಪಾತದ ತುದಿಯಲ್ಲಿ ನಿಂತಿದ್ದ ಸಂತೋಷ್ ಕಾಲು ಜಾರಿ ನೂರಾರು ಅಡಿ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಕಲ್ಲು ಬಂಡೆಗಳು ಬಡಿದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
5 ವರ್ಷ ಹಿಂದಷ್ಟೇ ಮದುವೆ
ಮೃತ ಶಿಕ್ಷಕ ಸಂತೋಷ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಶ್ವೇತ ಜೊತೆ ಕಳೆದ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಲಕ್ಷ್ಮೀಸಾಗರ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ದಸರಾ ರಜೆ ಸಿಕ್ಕ ಹಿನ್ನಲೆ ಕೆಮ್ಮಣ್ಣುಗುಂಡಿಗೆ ಹೆಂಡತಿ ಜೊತೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಭೀಕರ ದುರಂತ ಸಂಭವಿಸಿದೆ. ಸದ್ಯ ಮೃತ ದೇಹವನ್ನ ಹಗ್ಗದ ಮೂಲಕ ನೂರಾರು ಅಡಿಗಳ ಪ್ರಪಾತದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ, ಮಾತು ಕೇಳದ ಶಿಕ್ಷಕ, ಹೆಂಡತಿ ಜೊತೆ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವುದು ಮಾತ್ರ ದುರಂತವೇ ಸರಿ.
