ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಉದ್ಘಾಟನಾ ಸಮಾರಂಭವು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ವೇದಿಕೆಯ ಮೇಲೆ ಪ್ರತಿರೋಧದ ದನಿಯೂ ಮೊಳಗಿದೆ. ಪ್ಯಾಲೆಸ್ಟೀನ್ ಮೂಲದ ಚಲನಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ನಿರ್ಧಾರವನ್ನು ಖಂಡಿಸಿ, ಚಿತ್ರೋತ್ಸವದ ರಾಯಭಾರಿಯೂ ಆಗಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಗುರುವಾರ ಸಂಜೆ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಪ್ಯಾಲೆಸ್ಟೀನ್ನ ಕೆಲವು ಚಿತ್ರಗಳಿಗೆ ಅನುಮತಿ (Clearance) ನೀಡಲು ನಿರಾಕರಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. “ಕಲೆ ಮತ್ತು ಸಾಹಿತ್ಯಕ್ಕೆ ಯಾವುದೇ ಗಡಿಗಳಿರಬಾರದು. ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಉದ್ದೇಶವೇ ಮನುಷ್ಯರ ಕಥೆಗಳನ್ನು, ನೋವುಗಳನ್ನು ಹಂಚಿಕೊಳ್ಳುವುದು. ಆದರೆ ಇಂದು ರಾಜಕೀಯ ಹಸ್ತಕ್ಷೇಪಗಳು ಇಂತಹ ವೇದಿಕೆಗಳನ್ನೂ ಬಿಡುತ್ತಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪ್ಯಾಲೆಸ್ಟೀನ್ ಕವಿಯ ಕವಿತೆ ಸಾಲುಗಳನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್
ಈ ಸಂದರ್ಭದಲ್ಲಿ ಪ್ರಖ್ಯಾತ ಪ್ಯಾಲೆಸ್ಟೀನ್ ಕವಿ ಮಹಮೂದ್ ದರ್ವಿಶ್ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ಯುದ್ಧದ ಭೀಕರತೆ ಮತ್ತು ಸಾಮಾನ್ಯ ಜನರ ಅಸಹಾಯಕತೆಯನ್ನು ಸಭಿಕರ ಮುಂದಿಟ್ಟರು. “ಯುದ್ಧಗಳು ಕೊನೆಗೊಳ್ಳುತ್ತವೆ, ನಾಯಕರು ಕೈಕುಲುಕಿ ಅಲ್ಲಿಂದ ತೆರಳುತ್ತಾರೆ. ಆದರೆ, ಆ ವೃದ್ಧ ತಾಯಿ ತನ್ನ ಹುತಾತ್ಮ ಮಗನಿಗಾಗಿ ಕಾಯುತ್ತಲೇ ಇರುತ್ತಾಳೆ…” ಎಂಬ ಕವಿತೆಯ ಸಾಲುಗಳನ್ನು ಓದುವ ಮೂಲಕ, ಪ್ಯಾಲೆಸ್ಟೀನ್ ಜನರ ನೋವಿಗೆ ಕನ್ನಡಿ ಹಿಡಿದರು.
ಇದನ್ನೂ ಓದಿ | 2025-26ರ ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತಾರಾಮನ್
ಕೇಂದ್ರದ ನಿಲುವಿನ ವಿರುದ್ಧ ರಾಜ್ಯ ಸರ್ಕಾರವು ದಿಟ್ಟ ನಿಲುವು ತಳೆಯಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇದೇ ವೇಳೆ ಒತ್ತಾಯಿಸಿದರು. “ಕೇರಳ ಸರ್ಕಾರವು ತನ್ನ ಚಲನಚಿತ್ರೋತ್ಸವದಲ್ಲಿ ಇಂತಹದೇ ಸಂದರ್ಭ ಬಂದಾಗ ಕೇಂದ್ರದ ನಿರ್ಧಾರವನ್ನು ಲೆಕ್ಕಿಸದೆ ಪ್ಯಾಲೆಸ್ಟೀನ್ ಸಿನಿಮಾಗಳನ್ನು ಪ್ರದರ್ಶಿಸಿ ಧೈರ್ಯ ತೋರಿತ್ತು. ಕರ್ನಾಟಕ ಸರ್ಕಾರವೂ ಅದೇ ಮಾದರಿಯಲ್ಲಿ ದನಿ ಎತ್ತಬೇಕು. ನಮ್ಮ ನೆಲದಲ್ಲಿ ಬೇರೆಯವರ ಕಥೆಗಳನ್ನು ಹೇಳಲು ಅವಕಾಶ ನೀಡದಿರುವುದು ಸರಿಯಲ್ಲ” ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.
