ಬೆಳಗಾವಿ: ಹಳೆಯ ಕಟ್ಟಡವೊಂದನ್ನು ನೆಲಸಮ ಮಾಡುವ ಕಾಮಗಾರಿಯ ವೇಳೆ ಗೋಡೆ ಕುಸಿದು ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ನಿವಾಸಿ ತುಕಾರಾಮ ಕುರಿ (35) ಮೃತಪಟ್ಟ ದುರ್ದೈವಿ. ಯರಗಟ್ಟಿ ಪಟ್ಟಣದಲ್ಲಿರುವ ಹಳೆಯ ಅಂಗಡಿ ಕಟ್ಟಡವೊಂದನ್ನು ನೆಲಸಮ ಮಾಡುವ ಕೆಲಸಕ್ಕೆ ತುಕಾರಾಮ ಅವರು ಬಂದಿದ್ದರು. ಕಟ್ಟಡದ ಗೋಡೆಯನ್ನು ಕೆಡವುತ್ತಿದ್ದ ಸಂದರ್ಭದಲ್ಲಿ, ಹಳೆಯ ಗೋಡೆಯು ಏಕಾಏಕಿ ಅವರ ಮೇಲೆ ಕುಸಿದು ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಪುಲ್ವಾಮಾ ದಾಳಿಗೆ 7 ವರ್ಷ: ಅಂದು ಹರಿದಿದ್ದು ಪ್ರೇಮದ ಹೊಳೆಯಲ್ಲ, ವೀರ ಯೋಧರ ರಕ್ತದ ಕೆಂಪು…
ಸ್ಥಳಕ್ಕೆ ಪೊಲೀಸರ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಐ.ಎಮ್. ಮಠಪತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
