ಬೆಂಗಳೂರು: ಕೆಎಸ್ಆರ್ಟಿಸಿ ನೌಕರನೊಬ್ಬನನ್ನು ಅನ್ಯಾಯವಾಗಿ ವರ್ಗಾವಣೆ ಮಾಡಲು ಸ್ವತಃ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಶಿಫಾರಸು ಪತ್ರ ಸೃಷ್ಟಿಸಿದ ಆಘಾತಕಾರಿ ಪ್ರಕರಣವೊಂದು ವಿಧಾನಸೌಧದ ಅಂಗಳದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೆಎಸ್ಆರ್ಟಿಸಿ ಉನ್ನತ ಅಧಿಕಾರಿ ಹಾಗೂ ಸಿಎಂ ಕಚೇರಿ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಸ್ಯಾಟಲೈಟ್ ಡಿಪೋ-6ರಲ್ಲಿ ಜಯದೇವ ಎಂಬುವರು ಚಾಲಕ ಹಾಗೂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಕೆಎಸ್ಆರ್ಟಿಸಿ ಘಟಕದಲ್ಲಿ ನೌಕರರಿಗೆ ರಜೆ ಮಂಜೂರು ಮಾಡಲು ಅಧಿಕಾರಿಗಳು ಲಂಚ ಪಡೆಯುತ್ತಿದ್ದರು ಎನ್ನಲಾದ ಆರೋಪವಿತ್ತು. ಈ ಬಗ್ಗೆ ಜಯದೇವ ಅವರು ಸಾಕ್ಷಿ ಸಮೇತ ಕೆಎಸ್ಆರ್ಟಿಸಿ ಮುಖ್ಯಸ್ಥರಿಗೆ ಪತ್ರ ಬರೆದು ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು. ಇದೇ ಕಾರಣಕ್ಕೆ ದ್ವೇಷ ಸಾಧಿಸಿದ ಅಧಿಕಾರಿಗಳು, ಜಯದೇವ ಅವರನ್ನು ಹೇಗಾದರೂ ಮಾಡಿ ಪಾಠ ಕಲಿಸಬೇಕೆಂದು ನಿರ್ಧರಿಸಿದ್ದರು.
ನಕಲಿ ಸಹಿಯ ಸಂಚು:
ಜಯದೇವ ಅವರನ್ನು ಬೆಂಗಳೂರಿನಿಂದ ಮಂಗಳೂರಿಗೆ ಏಕಾಏಕಿ ವರ್ಗಾವಣೆ ಮಾಡಲು ಹಿರಿಯ ಅಧಿಕಾರಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಆಂತೋನಿ ಜಾರ್ಜ್ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಕಚೇರಿಯ ಸಿಬ್ಬಂದಿ ಸಚಿನ್ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಯದೇವ ಅವರನ್ನು ವರ್ಗಾವಣೆ ಮಾಡುವಂತೆ ಸ್ವತಃ ಮುಖ್ಯಮಂತ್ರಿಗಳು ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು ಶಿಫಾರಸು ಮಾಡಿದ್ದಾರೆ ಎಂದು ಬಿಂಬಿಸಲು, ಅವರ ನಕಲಿ ಸಹಿಗಳನ್ನು ಬಳಸಿ ಶಿಫಾರಸು ಪತ್ರಗಳನ್ನು ಸಿದ್ಧಪಡಿಸಲಾಗಿತ್ತು.
ನಕಲಿ ಪತ್ರದ ಆಧಾರದ ಮೇಲೆ ಜಯದೇವ ಅವರನ್ನು ಏಕಾಏಕಿ ಮಂಗಳೂರಿಗೆ ಎತ್ತಂಗಡಿ ಮಾಡಲಾಯಿತು. ಅಷ್ಟೇ ಅಲ್ಲದೆ, 2025ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಸಂಬಳವನ್ನೂ ನೀಡದೆ ಅಧಿಕಾರಿಗಳು ಸತಾಯಿಸಿದ್ದಾರೆ. ಈ ಅನ್ಯಾಯದ ವಿರುದ್ಧ ಜಯದೇವ ಅವರು ಕಾನೂನು ಹೋರಾಟ ನಡೆಸಿದ ಪರಿಣಾಮ, ಇದೀಗ ಮತ್ತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ | ಕಾಂಗ್ರೆಸ್ ಸರ್ಕಾರದ 1,000 ದಿನಗಳ ಸಂಭ್ರಮ: “ನುಡಿದಂತೆ ನಡೆದಿದ್ದೇವೆ” ಎಂದ ಸಿದ್ದರಾಮಯ್ಯ
ಎಫ್ಐಆರ್ ದಾಖಲು:
ಸಿಎಂ ಹಾಗೂ ಸಚಿವರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ಸಹಿ ಮಾಡಿದ ಆರೋಪದ ಮೇಲೆ ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಆಂತೋನಿ ಜಾರ್ಜ್ ಮತ್ತು ಸಿಎಂ ಕಚೇರಿ ಸಿಬ್ಬಂದಿ ಸಚಿನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
