ಚಿತ್ರರಂಗದಲ್ಲಿ ಹೊಸಬರ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಲ್ಲುವುದು ಕನ್ನಡಿಗರ ಹೆಮ್ಮೆ. ಇದೀಗ ಅದೇ ಸಾಲಿಗೆ ಸೇರಿದೆ ಹೊಸ ಕಲಾವಿದರೇ ಸೇರಿ ಮಾಡಿರುವ ‘ಚಂದ್ರಹಾಸ’ ಸಿನಿಮಾ. ಇತ್ತೀಚೆಗಷ್ಟೇ ಈ ಚಿತ್ರದ ಮೊದಲ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಸ್ಯಾಂಡಲ್ವುಡ್ನ ಸ್ಟಾರ್ ನಟ ಶರಣ್ ಹಾಗೂ ಖ್ಯಾತ ಗಾಯಕ ನವೀನ್ ಸಜ್ಜು ಹೊಸಬರ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
ಜೋಡಿಯಾದ ನಟ ಶರಣ್ – ನವೀನ್ ಸಜ್ಜು
ಚಂದ್ರಹಾಸ’ ಚಿತ್ರದ ‘ಚಡ್ಡಿ ಬಡ್ಡಿ’ ಎಂಬ ಹಾಡನ್ನು ನಟ ಶರಣ್ ಹಾಗೂ ಗಾಯಕ ನವೀನ್ ಸಜ್ಜು ಜೊತೆಯಾಗಿ ಹಾಡಿರುವುದು ಈ ಹಾಡಿನ ವಿಶೇಷ. ಇವರಿಬ್ಬರ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ಮೊದಲ ಹಾಡು ಇದಾಗಿದ್ದು, ಸ್ನೇಹಿತರ ಮಧ್ಯೆ ಇರುವ ಗಟ್ಟಿಯಾದ ಬಾಂಧವ್ಯದ ಮೇಲೆ ಈ ಗೀತೆಯನ್ನು ರಚಿಸಲಾಗಿದೆ.
ಸ್ಟಾರ್ ತಂತ್ರಜ್ಞರ ಸಾಥ್
ಖ್ಯಾತ ನಿರ್ಮಾಪಕಿ ಶೈಲಜಾ ನಾಗ್ ಅವರು ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಹೊಸಬರ ‘ಚಂದ್ರಹಾಸ’ ಸಿನಿಮಾದ ಮೊದಲ ಹಾಡು ‘ಚಡ್ಡಿ ಬಡ್ಡಿ’ ಸದ್ಯ ಭಾರಿ ಸೌಂಡ್ ಮಾಡುತ್ತಿದೆ. ಕನ್ನಡದ ಖ್ಯಾತ ನಿರ್ದೇಶಕ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರು ಈ ಫ್ರೆಂಡ್ಶಿಪ್ ಸಾಂಗ್ಗೆ ತಮ್ಮದೇ ಶೈಲಿಯ ಆಕರ್ಷಕ ಸಾಹಿತ್ಯ ಬರೆದಿದ್ದಾರೆ.
ಈ ಸುಂದರ ಸಾಲುಗಳಿಗೆ ಪ್ರಸಿದ್ಧ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ವಿಶಿಷ್ಟ ಟ್ಯೂನ್ ಹಾಕುವ ಮೂಲಕ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. ನಟ ಶರಣ್ ಹಾಗೂ ನವೀನ್ ಸಜ್ಜು ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು, ಪ್ರಸಿದ್ಧ D Beats ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಕೇಳುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಕಾಮಿಡಿ ಕಿಲಾಡಿ ವಿನ್ನರ್ ಹರೀಶ್ ಹಿರಿಯೂರ್ ನಾಯಕ
‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದಿದ್ದ ಹರೀಶ್ ಹಿರಿಯೂರ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಛಾಯಾಶ್ರೀ ಉಮೇಶ್ ಜೋಡಿಯಾಗಿದ್ದಾರೆ. ಉಳಿದಂತೆ ಸ್ನೇಹಿತನ ಪಾತ್ರದಲ್ಲಿ ನಿಂಗರಾಜು ಮಂಡ್ಯ ಕಾಣಿಸಿಕೊಂಡಿದ್ದು, ಸಂತೋಶ್ ಕೆರಿ, ಸೂರ್ಯಕಲ, ಜ್ಯೋತಿ ಮಂಗಳೂರು, ಕಳಕಪ್ಪ ತಲವಾರ್ ಸೇರಿದಂತೆ ಹಲವು ಅನುಭವಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.
ಗೆಳೆಯನಿಗೆ ಸಾಥ್ ನೀಡಿದ ಕಾಮಿಡಿ ಕಿಲಾಡಿಗಳು
‘ಚಂದ್ರಹಾಸ’ ಚಿತ್ರದ ಧ್ವನಿ ಸುರಳಿ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿ ಶೋ ನ ಜನಪ್ರಿಯ ಕಲಾವಿದರಾದ ಅಪ್ಪಣ್ಣ, ಜಗಪ್ಪ, ಸುಷ್ಮಿತಾ, ನಯನಾ ಸೇರಿದಂತೆ ಇಡೀ ತಂಡ ಆಗಮಿಸಿ ತಮ್ಮ ನೆಚ್ಚಿನ ಸ್ನೇಹಿತ ಹರೀಶ್ಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
‘ಚಂದ್ರಹಾಸ’ ಸಿನಿಮಾಗೆ ಕನ್ನಡದ ಪ್ರತಿಭಾವಂತ ತಾಂತ್ರಿಕ ತಂಡ ಸಾಥ್ ನೀಡಿದೆ. ಈ ಚಿತ್ರವನ್ನು ಹೊಸ ಆಲೋಚನೆಗಳೊಂದಿಗೆ ಆನಂದ್ ಎಸ್. ಕಲಕಬಂಡಿ ಅವರು ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕೆ ಭದ್ರ ಬುನಾದಿ ಹಾಕಿರುವ ಬಸವಂತಗೌಡ ಪಾಟೀಲ್ ಅವರು ಇದರ ಮುಖ್ಯ ನಿರ್ಮಾಪಕರಾಗಿದ್ದು, ಇವರಿಗೆ ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಇನ್ನು ಚಿತ್ರದ ದೃಶ್ಯ ವೈಭವವನ್ನು ತನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿರುವವರು ಛಾಯಾಗ್ರಾಹಕ ಚೇತನ್ ಶರ್ಮ. ಚಿತ್ರಕ್ಕೆ ಅಚ್ಚುಕಟ್ಟಾದ ರೂಪ ನೀಡಲು ವಿ. ಗಿರೀಶ್ ಎಂ. ಸಿ. ಹಳ್ಳಿ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಒಟ್ಟಾರೆ ಈ ಗಟ್ಟಿಯಾದ ತಾಂತ್ರಿಕ ತಂಡದ ಶ್ರಮದಿಂದ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ.
