ಬೆಂಗಳೂರು, ಜು. 20:: ರಾಜ್ಯದಾದ್ಯಂತ ವಂಶವೃಕ್ಷ ದೃಢೀಕರಣ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಏಕರೂಪಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈ ಕುರಿತು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸುತ್ತೋಲೆ ಹೊರಡಿಸಿದ್ದು, ಇನ್ನು ಮುಂದೆ ಈ ಪ್ರಮಾಣಪತ್ರವನ್ನು ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆಯ ಮೂಲಕವೇ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಅರ್ಜಿದಾರರು ₹100 ಮೌಲ್ಯದ ಛಾಪಾ ಕಾಗದದಲ್ಲಿ ನೋಟರಿ ದೃಢೀಕರಿಸಿದ ಅಫಿಡವಿಟ್, ಆಧಾರ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಬಳಿಕ ಗ್ರಾಮ ಆಡಳಿತಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ ತಮ್ಮ ವರದಿಯನ್ನು ರಾಜಸ್ವ ನಿರೀಕ್ಷಕರಿಗೆ ಸಲ್ಲಿಸಲಿದ್ದಾರೆ.
ರಾಜಸ್ವ ನಿರೀಕ್ಷಕರು ಪರಿಶೀಲನಾ ವರದಿಯನ್ನು ಮೌಲ್ಯಮಾಪನ ಮಾಡಿ ಉಪ ತಹಶೀಲ್ದಾರರಿಗೆ ಶಿಫಾರಸು ಕಳುಹಿಸಲಿದ್ದಾರೆ. ಅರ್ಜಿಯನ್ನು ಅಂತಿಮವಾಗಿ ಅನುಮೋದಿಸುವ ಅಧಿಕಾರ ಉಪ ತಹಶೀಲ್ದಾರರಿಗೇ ಇರಲಿದೆ. ಅನುಮೋದನೆ ದೊರೆತ ಬಳಿಕ ವಂಶವೃಕ್ಷ ದೃಢೀಕರಣ ಪ್ರಮಾಣಪತ್ರವನ್ನು ಡಿಜಿಟಲ್ ಸ್ವರೂಪದಲ್ಲಿ ಅರ್ಜಿದಾರರಿಗೆ ನೀಡಲಾಗುತ್ತದೆ.
