ಕಾಂಗ್ರೆಸ್ ಕಚೇರಿಯಿಂದ ಮೊಟ್ಟೆ, ಲಾಂಗ್ ತಂದಿರುವ ವಿಡಿಯೋಗಳಿವೆ. ರಾಜ್ಯದಲ್ಲಿರೋದು ಗ್ರೇಟ್ರೌಡಿ ಕೊತ್ವಾಲ್ ರಾಮಚಂದ್ರ ಶಿಷ್ಯಂದಿರ ಸರ್ಕಾರ. ಇದು ಕೊತ್ವಾಲ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು, ಜು.22: ಕಾಂಗ್ರೆಸ್ಸಿನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್, ಬಿಜೆಪಿಯವರು ಮೊಟ್ಟೆ ತಂದಿದ್ದರು, ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಇದು ಅಪ್ಪಟ ಸುಳ್ಳು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಲ್ಲಿ ಸುಮಾರು 100 ಸಿ.ಸಿ. ಟಿವಿ ಕ್ಯಾಮೆರಾಗಳಿದ್ದವು. ಪೊಲೀಸರೂ ಇದ್ದು, ಅವರ ಕ್ಯಾಮೆರಾಗಳಿದ್ದವು. ತನಿಖೆ ಮಾಡಲಿ ಎಂದು ಸವಾಲು ಹಾಕಿದರು. ನಮ್ಮ ಬಸ್ಸನ್ನು ಕಾಂಗ್ರೆಸ್ ಕಚೇರಿ ಮುಂದೆ ಬರಲು ಹೇಳಿದವರು ನೀವೇ ತಾನೇ, ಬಸ್ಸು ಕೆಟ್ಟು ನಿಂತಿದ್ದು ನಿಮ್ಮ ಆದೇಶದ ಮೇಲೆ ತಾನೇ? ಎಂದು ಪ್ರಶ್ನಿಸಿದರು.
ಸೆಲ್ಫ್ ಡಿಫೆನ್ಸ್ ಹೇಳುವ ಹರಿಪ್ರಸಾದ್ ಅವರಿಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ; ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಸತ್ತು ಹೋಗಿದೆಯೇ ಎಂದು ಪ್ರಶ್ನಿಸಿದರು. ಪೊಲೀಸ್ ಇಲಾಖೆ ಸತ್ತು ಹೋಗಿದೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ನೀವು ಮಾಡುವ ತನಿಖೆಗೆ ಸಿದ್ಧ; ಇದು ಪೂರ್ವನಿಯೋಜಿತ, ಬಿಜೆಪಿ ನಾಯಕರನ್ನು ಕೊಲೆ ಮಾಡುವ ಪ್ರಯತ್ನ ಎಂದು ಅಶೋಕ್ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಿಂದ ಮೊಟ್ಟೆ, ಲಾಂಗ್ ತಂದಿರುವ ವಿಡಿಯೋಗಳಿವೆ ಎಂದು ಹೇಳಿದರು. ಕೊತ್ವಾಲ್ ಶಿಷ್ಯರ ಸರಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ.ತಾಕಿತ್ತಿದ್ರೆ ತನಿಖೆ ನಡಸಲಿ, ಯಾವುದೇ ತನಿಖೆಗೂ ನಾವು ಸಿದ್ಧ ಎಂದು ಸವಾಲು ಹಾಕಿದರು.
