ಬೆಂಗಳೂರು ಹೊರವಲಯದ ಬೊಮ್ಮಸಂದ್ರದಲ್ಲಿರುವ ಪಿಜಿಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಒಂಬತ್ತು ಕಾರ್ಮಿಕರು ಗಾಯಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು, ಜು.23: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಖಾಸಗಿ ಪಿಜಿಯೊಂದರಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಗ್ಯಾಸ್ ಸ್ಫೋಟದಲ್ಲಿ ಒಂಬತ್ತು ವಲಸೆ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಈ ಅವಘಡ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಡುಗೆ ಮನೆಯಲ್ಲಿ ಸೋರಿಕೆಯಾಗಿದ್ದ ಅನಿಲ ಕೊಠಡಿಯಲ್ಲಿ ಸಂಗ್ರಹಗೊಂಡು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ರಾತ್ರಿ ಸೊಳ್ಳೆಗಳು ಒಳಗೆ ಬಾರದಂತೆ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಲಾಗಿತ್ತು ಎನ್ನಲಾಗಿದೆ. ಇದರಿಂದ ಸೋರಿಕೆಯಾದ ಅನಿಲ ಹೊರಹೋಗದೆ ಕೊಠಡಿಯೊಳಗೆ ಸಂಗ್ರಹಗೊಂಡಿತ್ತು. ಬೆಳಗ್ಗೆ ವಿದ್ಯುತ್ ಸ್ವಿಚ್ ಆನ್ ಮಾಡಿದಾಗ ಕಿಡಿ ತಗುಲಿ ಸ್ಫೋಟ ಸಂಭವಿಸಿರಬಹುದು ಎಂಬ ಸಾಧ್ಯತೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಫೋಟದ ತೀವ್ರತೆಗೆ ಮಹಡಿಯ ಬಾಗಿಲು ಮತ್ತು ಕಿಟಕಿಗಳ ಗಾಜುಗಳು ಒಡೆದುಹೋಗಿದ್ದು, ಪಕ್ಕದ ಕಟ್ಟಡದ ಭಾಗಕ್ಕೂ ಹಾನಿಯಾಗಿದೆ. ಒಬ್ಬ ಕಾರ್ಮಿಕ ಕಟ್ಟಡದಿಂದ ಕೆಳಗೆ ಜಿಗಿದ ಪರಿಣಾಮ ಸಣ್ಣ ಪ್ರಮಾಣದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಡೆದ ಕೊಠಡಿಯಲ್ಲಿ ಸಣ್ಣ ಅಡುಗೆ ಮನೆ ಮತ್ತು ಸ್ನಾನಗೃಹವಿದ್ದು, ಒಂಬತ್ತು ಕಾರ್ಮಿಕರು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಗಾಯಾಳುಗಳೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಗಾಯಗೊಂಡವರ ಪೈಕಿ ಆರು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಕೆಲವರಿಗೆ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿದ್ದರೂ, ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಿಯಂತ್ರಣ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿಜಿ ಸುರಕ್ಷತಾ ನಿಯಮಗಳ ಬಗ್ಗೆ ತನಿಖೆ
ಕಟ್ಟಡವು ನಾಗರಾಜ್ ರೆಡ್ಡಿ ಎಂಬುವರಿಗೆ ಸೇರಿದ್ದು, ಪಿಜಿ ನಿರ್ವಹಣೆಗಾಗಿ ಮತ್ತೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು ಎನ್ನಲಾಗಿದೆ. ಒಂದೇ ಕೊಠಡಿಯಲ್ಲಿ ಒಂಬತ್ತು ಮಂದಿಗೆ ವಾಸಕ್ಕೆ ಅವಕಾಶ ನೀಡಿದ್ದು ಹೇಗೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸ್ಫೋಟಕ್ಕೆ ಕಾರಣವಾದ ಸಿಲಿಂಡರ್, ರೆಗ್ಯುಲೇಟರ್ ಮತ್ತು ಸಂಪರ್ಕ ಪೈಪ್ಗಳ ಗುಣಮಟ್ಟವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪಿಜಿ ನಿರ್ವಹಣೆಯಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದರ ಬಗ್ಗೆಯೂ ತನಿಖೆ ಮುಂದುವರಿದಿದೆ.

