vinay kulkarni Grants bail: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ವಿನಯ್ ಕುಲಕರ್ಣಿ ಸೇರಿದಂತೆ 10 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು, ಜು.31: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿಕ್ಷೆ ಅಮಾನತಿನಲ್ಲಿಟ್ಟು ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಯೋಗೀಶ್ ಗೌಡ ಕೊಲೆ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿ ತಮಗೆ ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ಮತ್ತು ಜಾಮೀನು ನೀಡಿ ಹೈಕೋರ್ಟ್ ಮಹತ್ವದ ಮಧ್ಯಂತರ ತೀರ್ಪು ನೀಡಿದೆ.
ವಿನಯ್ ಸೇರಿ 10 ಆರೋಪಿಗಳಗೂ ಜಾಮೀನು
ವಿನಯ್ ಕುಲಕರ್ಣಿ, ಚನ್ನಕೇಶವ ಟಿಂಗರಿಕರ್ ಸೇರಿದಂತೆ 10 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ವಿನಯ್ ಕುಲಕರ್ಣಿಗೆ ವಿಧಿಸಿದ್ದ ಶಿಕ್ಷೆ ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ. 5 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇರೆಗೆ ಜಾಮೀನು ನೀಡಲಾಗಿದೆ. ನ್ಯಾಯಮೂರ್ತಿ ಬಸವರಾಜ್ ಹಾಗೂ ಮೊಹಮ್ಮದ್ ನವಾಜ್ ಅವರ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. 5 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸಬೇಕು ಎಂದು ಆದೇಶಿಸಿದೆ.
ಏನಿದು ಪ್ರಕರಣ
2016ರ ಜೂನ್ನಲ್ಲಿ ಧಾರವಾಡದಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆಯಾಗಿತ್ತು. ಕಳೆದ ಏಪ್ರಿಲ್ನಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ 17 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ಪರಿಣಾಮವಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು.
ಇದೀಗ ಹೈಕೋರ್ಟ್ ಶಿಕ್ಷೆ ಮತ್ತು ದೋಷಾರೋಪಣೆಯ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಜಾಮೀನು ಮಂಜೂರು ಮಾಡಿರುವುದರಿಂದ, ವಿನಯ್ ಕುಲಕರ್ಣಿಗೆ ಅವರ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಧ್ಯಂತರ ಕಾನೂನು ಪರಿಹಾರ ದೊರೆತಿದೆ. ಹಾಗಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಜೀವ ಸಿಕ್ಕಂತಾಗಿದೆ.
