ಹೊಸಪೇಟೆ(ವಿಜಯನಗರ), ಆ.12: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪ್ರವಾಸಿ ತಾಣವಾದ ಆಂಬೋಲಿ ಜಲಪಾತದಲ್ಲಿ ಪ್ರವಾಸದ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ತಾಲೂಕಿನ ಕಮಲಾಪುರ ನಿವಾಸಿ ಗಂಗಾಧರ (40) ಹಾವು ಕಡಿತಕ್ಕೆ ಒಳಗಾಗಿ ದುರದೃಷ್ಟವಶಾತ್ ಮೃತಪಟ್ಟಿದ್ದಾರೆ.
ತಮ್ಮ ಸ್ನೇಹಿತರೊಂದಿಗೆ ಕಮಲಾಪುರದಿಂದ ಭಾನುವಾರ ಬೆಳಗ್ಗೆ ಆಂಬೋಲಿ ಪ್ರವಾಸಕ್ಕೆ ತೆರಳಿದ್ದರು. ಮಧ್ಯಾಹ್ನಕ್ಕೆಲ್ಲ ಆಂಬೋಲಿ ಗ್ರಾಮಕ್ಕೆ ಸೇರಿ ಅಲ್ಲಿನ ಜಲಪಾತ ಭೋರ್ಗರೆಯುತ್ತಿದ್ದ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ವೇಳೆ ಗಂಗಾಧರ ಅವರಿಗೆ ವಿಷಪೂರಿತ ಹಾವೊಂದು ಕಚ್ಚಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಗ್ರಾಮೀಣ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಸಾವಂತವಾಡಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸುತ್ತಿದ್ದ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಗಂಗಾಧರ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಮಹಾರಾಷ್ಟ್ರದ ಸಾವಂತವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
