Mobile phones banned on safaris from now on! Forest Department enforces strict rules..? ಇನ್ಮುಂದೆ ಸಫಾರಿಯಲ್ಲಿ ಮೊಬೈಲ್ ಫೋನ್ ಬ್ಯಾನ್! ಅರಣ್ಯ ಇಲಾಖೆಯಿಂದ ಕಠಿಣ ನಿಯಮ ಜಾರಿ..?
ಸಫಾರಿ ಜೀಪ್ನಲ್ಲಿ ಕುಳಿತು ಕಾಡಿನ ಮೌನವನ್ನು ಆಲಿಸುತ್ತಿರುವಾಗಲೇ ಹುಲಿ ಪ್ರತ್ಯಕ್ಷವಾದರೆ, ಅದರ ಗಾಂಭೀರ್ಯದ ನೋಟವನ್ನ ಸೆರೆಹಿಡಿಯುವ ಖುಷಿಯೇ ಬೇರೆ. ಆದರೆ, ಈ ಖುಷಿಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಂಡೀಪುರ, ಬಿಆರ್ಟಿ ಸಫಾರಿಯಲ್ಲಿ ಫೋನ್ ಬಳಕೆ ಸಂಪೂರ್ಣ ನಿಷೇಧ
ಚಾಮರಾಜನಗರ: ಸಫಾರಿ ಜೀಪ್ನಲ್ಲಿ ಕುಳಿತು ಕಾಡಿನ ಮೌನವನ್ನು ಆಲಿಸುತ್ತಿರುವಾಗಲೇ, ಎದುರಿಗೆ ಹುಲಿ ಪ್ರತ್ಯಕ್ಷವಾದರೆ ಆಗುವ ರೋಮಾಂಚನವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೈಯಲ್ಲಿ ದುಬಾರಿ ಕ್ಯಾಮೆರಾ ಇಲ್ಲ, ಇರುವುದು ಒಂದೇ ಒಂದು ಮೊಬೈಲ್ ಫೋನ್. ಅದರಲ್ಲೇ ಹುಲಿಯ ಗಾಂಭೀರ್ಯದ ನೋಟ, ಜಿಂಕೆಯ ಚುರುಕು ಜಿಗಿತವನ್ನು ಸೆರೆಹಿಡಿಯುವ ಖುಷಿಯೇ ಬೇರೆ. ಆದರೆ, ಈ ಖುಷಿಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ವಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಎಲ್ಲೆಲ್ಲಿ ಮೊಬೈಲ್ ಫೋನ್ ನಿಷೇಧ?
ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು, ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ವನ್ಯಜೀವಿ ಧಾಮಗಳಾದ ಬಂಡೀಪುರ, ಕೆ.ಗುಡಿ (ಬಿಆರ್ಟಿ) ಹಾಗೂ ಪಿ.ಜಿ.ಪಾಳ್ಯ (ಎಂಎಂ ಹಿಲ್ಸ್) ಸಫಾರಿಗಳಲ್ಲಿ ಇಂದಿನಿಂದಲೇ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಏತನ್ಮಧ್ಯೆ, ಈ ಹಿಂದೆಯೇ ಜಿಮ್ ಕಾರ್ಬೆಟ್, ರಣಥಂಬೋರ್, ತಾಡೋಬಾ, ಕನ್ಹಾ ಮತ್ತು ಪೆಂಚ್ ಸೇರಿದಂತೆ ದೇಶದ ಬಹುತೇಕ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ವಲಯಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.
ನಿಷೇಧ ಯಾರಿಗೆಲ್ಲ ಅನ್ವಯಿಸುತ್ತದೆ?
ಸಫಾರಿ ವಾಹನದ ಒಳಗಡೆ ಇರುವ ಪ್ರವಾಸಿಗರು, ವಾಹನ ಚಾಲಕರು ಹಾಗೂ ಗೈಡ್ಗಳು ಸೇರಿದಂತೆ ಯಾರಿಗೂ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ. ಪ್ರವಾಸಿಗರು ತಮ್ಮ ಫೋನ್ಗಳನ್ನು ಸಫಾರಿ ಆರಂಭವಾಗುವ ಮುನ್ನವೇ ಪ್ರವೇಶ ದ್ವಾರದಲ್ಲಿ ಇರುವ ಲಾಕರ್ಗಳು ಅಥವಾ ಕೌಂಟರ್ಗಳಲ್ಲಿ ಜಮಾ ಮಾಡಬೇಕಾಗುತ್ತದೆ.
ಹಾಗಾದ್ರೆ, ಕ್ಯಾಮೆರಾಗಳಿಗೆ ಅನುಮತಿ ಇದೆಯೇ?
ಹೌದು, ಪ್ರವಾಸೋದ್ಯಮ ಇಲಾಖೆಯ ನಿಯಮಾವಳಿಗಳ ಪ್ರಕಾರ ಡಿಜಿಟಲ್ ಕ್ಯಾಮೆರಾಗಳು ಹಾಗೂ DSLR ಕ್ಯಾಮೆರಾಗಳ ಬಳಕೆಗೆ ಮುಂಚಿನಂತೆಯೇ ಅನುಮತಿ ಇದೆ. ಆದರೆ ಮೊಬೈಲ್ ಫೋನ್ ಮೂಲಕ ಫೋಟೋ, ವಿಡಿಯೋ ಅಥವಾ ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈ ಕಟ್ಟುನಿಟ್ಟಿನ ಕ್ರಮಕ್ಕೆ ಕಾರಣಗಳೇನು?
ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಫಾರಿ ವೇಳೆ ಪ್ರವಾಸಿಗರು ಪ್ರಾಣಿಗಳ ಸನಿಹಕ್ಕೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುವುದು, ರಿಂಗ್ಟೋನ್ಗಳ ಸದ್ದಿನಿಂದ ವನ್ಯಜೀವಿಗಳ ನೈಸರ್ಗಿಕ ನಡವಳಿಕೆಗೆ ತೊಂದರೆ ಕೊಡುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ಪ್ರಾಣಿಗಳು ಕಂಡ ತಕ್ಷಣ ಮೊಬೈಲ್ ಲೊಕೇಶನ್ ಶೇರ್ ಮಾಡಿ ಎಲ್ಲಾ ಸಫಾರಿ ವಾಹನಗಳು ಒಂದೇ ಕಡೆ ಮುಗಿಬಿದ್ದು ಕಾಡಿನೊಳಗೆ ಟ್ರಾಫಿಕ್ ಜಾಮ್ ಹಾಗೂ ಪ್ರಾಣಿಗಳಿಗೆ ಆತಂಕ ಸೃಷ್ಟಿಸುತ್ತಿದ್ದ ಜಾಲಕ್ಕೆ ಇದರಿಂದ ಬ್ರೇಕ್ ಬೀಳಲಿದೆ.
