North Karnataka reels under the onslaught of sugarcane farmers’ struggle: Highways shut down in 10 districts of the state, 2-day deadline for the Center, what are the demands..? – ಕಬ್ಬು ಬೆಳೆಗಾರರ ಹೋರಾಟದ ಕಿಚ್ಚಿಗೆ ಉ.ಕರ್ನಾಟಕ ತತ್ತರ: ರಾಜ್ಯದ 10 ಜಿಲ್ಲೆಗಳಲ್ಲಿ ಹೆದ್ದಾರಿ ಬಂದ್, ಕೇಂದ್ರಕ್ಕೆ 2 ದಿನ ಡೆಡ್ಲೈನ್, ಏನೆಲ್ಲಾ ಬೇಡಿಕೆ?
ದೆಹಲಿಯಲ್ಲಿ ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವಿನ ಮಾತುಕತೆ ವಿಫಲಗೊಂಡ ಬೆನ್ನಲ್ಲೇ, ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದಿದೆ. ಇದರ ಪರಿಣಾಮವಾಗಿ ಅ.13ರಂದು ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ 10 ಪ್ರಮುಖ ಜಿಲ್ಲೆಗಳಲ್ಲಿ ಹೋರಾಟದ ಬಿಸಿ ತಟ್ಟಿದ್ದು, ಕಬ್ಬು ಬೆಳೆಗಾರರು ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿ ಹಲವು ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಧರಣಿ ನಡೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 5,500ರೂ ಬೆಲೆ ನಿಗದಿ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದು, ಕೇಂದ್ರಕ್ಕೆ ತಮ್ಮ ಬೇಡಿಕೆ ಈಡೇರಿಕೆಗೆ 2 ದಿನಗಳ ಡೆಡ್ಲೈನ್ ನೀಡಿದ್ದಾರೆ. ಕಬ್ಬಿನ ಕಿಚ್ಚು ಹೇಗಿತ್ತು? ರೈತರ ಬೇಡಿಕೆಗಳೇನು? ಎಂಬುದರ ಮಾಹಿತಿ ಇಲ್ಲಿದೆ..?
ಹೈಲೈಟ್ಸ್:
- ಕಬ್ಬು ಬೆಳೆಗಾರರು ಕೇಂದ್ರದ ನಡುವೆ ಮಾತುಕತೆಗೆ ನಿರೀಕ್ಷಿತ ಫಲಿತಾಂಶ ಸಿಗದ ಬೆನ್ನಲ್ಲೇ ಟೋಲ್ಗಳಿಗೆ ರೈತರ ಮುತ್ತಿಗೆ, ಹೆದ್ದಾರಿ ಬಂದ್
- ಉತ್ತರ ಕರ್ನಾಟಕ, ಹಳೆ ಮೈಸೂರಲ್ಲೂ ಕಹಳೆ ಪ್ರಮುಖ ಊರುಗಳ ಹೆದ್ದಾರಿ ಸಂಚಾರ ಅಸ್ತವ್ಯಸ್ತ
- ಬೇಡಿಕೆ ಈಡೇರಿಸಿ, ಇಲ್ಲವೇ ಹೋರಾಟ ಎದುರಿಸಿ ಎಂದು ಸರ್ಕಾರಕ್ಕೆ ರೈತರ ಸವಾಲು

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಕೊಪ್ಪಳ, ಹಾವೇರಿ, ಧಾರವಾಡ ಜಿಲ್ಲೆ, ಹಳೆ ಮೈಸೂರು ಸೀಮೆಯ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಸೇರಿ 10 ಜಿಲ್ಲೆಗಳ ಹಲವು ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ, ಉತ್ತರದ ಹೆದ್ದಾರಿಗಳಲ್ಲಿ ವಾಹನಗಳು ಕಿಲೋ ಮೀಟರ್ಗಟ್ಟಲೆ ಸಾಲುಗಟ್ಟಿ ನಿಂತವು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ನಡೆದುಕೊಂಡೇ ತೆರಳುವಂತಾಯಿತು.
ರೈತರು ಕಬ್ಬಿಗೆ ನ್ಯಾಯಯುತ ಬೆಲೆ, ಎಫ್ಆರ್ಪಿ ಮತ್ತು ಎಂಎಸ್ಪಿ ಹೆಚ್ಚಳ, ರಾಜ್ಯ ಸಲಹಾ ಬೆಲೆ (ಎಸ್ಎಪಿ) ಘೋಷಣೆ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿಗೆ ಆಗ್ರಹಿಸಿದರು. ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಿರುವ ರೈತ ಮುಖಂಡರು, ಇಲ್ಲವಾದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಸೇರಿದಂತೆ ವಿವಿಧ ರೈತ ಸಂಘಟನೆಗಳು ನೇತೃತ್ವ ವಹಿಸಿದ್ದವು.
ಎಲ್ಲೆಲ್ಲಿ ಪ್ರತಿಭಟನೆ?
- ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್, ಹತ್ತರಗಿ ಟೋಲ್, ಕೊಗನೊಳ್ಳಿ ಟೋಲ್ (ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ), ಯರಗಟ್ಟಿ, ಹಲಕಿ ಕ್ರಾಸ್, ಚಿಕ್ಕಬಾಗೇವಾಡಿ ಮತ್ತು ಮಲ್ಲಮ್ಮನ ಬೆಳವಡಿ
- ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ (ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ), ಶಿರೂರ ಅಗಸಿ, ಹುನಗುಂದ ಹಾಗೂ ಮುಧೋಳ.
- ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರು ಕ್ರಾಸ್ (ರಾಷ್ಟ್ರೀಯ ಹೆದ್ದಾರಿ-50), ಸಿಂದಗಿ ತಾಲೂಕಿನ ಗಬಸಾವಳಗಿ.
- ಧಾರವಾಡ ಜಿಲ್ಲೆಯ ಅದರಗುಂಚಿ ಕ್ರಾಸ್. (ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ)
- ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ಹಿಟ್ನಾಳ ಟೋಲ್ಗೇಟ್.
- ಕಲಬುರಗಿಯ ರಾಮ ಮಂದಿರ ವೃತ್ತ. (ಅಹೋರಾತ್ರಿ ಪ್ರತಿಭಟನೆ)
- ಮಂಡ್ಯ ಜಿಲ್ಲೆಯ ಹೆದ್ದಾರಿ ಮತ್ತು ಮೈಸೂರು ಜಿಲ್ಲೆಯ ಕಡಕೊಳ ಟೋಲ್ ಬಳಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಚಾಮರಾಜನಗರ ಜಿಲ್ಲೆಯ ರೈತರೂ ಭಾಗವಹಿಸಿದ್ದರು.
ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳು..?
- ಪ್ರತಿ ಟನ್ ಕಬ್ಬಿಗೆ 5 ,500 ರೂ. ಬೆಲೆ ನಿಗದಿಯಾಗಲಿ
- ಕೇಂದ್ರ ಸರ್ಕಾರ ಎಫ್ಆರ್ಪಿ ಹೆಚ್ಚಿಸಲಿ
- ರಾಜ್ಯ ಸರ್ಕಾರ 900 ರೂ. ಎಸ್ಎಪಿ ಘೋಷಿಸಲಿ
- ಕಬ್ಬು ಸೇರಿದಂತೆ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತಪಡಿಸಲಿ
- ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಿ
- ಕಬ್ಬಿನ ತೂಕಮಾಪನ, ಸಕ್ಕರೆ ಇಳುವರಿಮತ್ತು ಪಾವತಿಯಲ್ಲಿಪಾರದರ್ಶಕತೆ ಇರಲಿ
- ರೈತರ ಬಾಕಿ ಪಾವತಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು.
ಸಂಚಾರ ಬಂದ್
ರಾಷ್ಟ್ರೀಯ ಹೆದ್ದಾರಿ ತಡೆಯಿಂದ ಸಾರ್ವಜನಿಕರು ಹಾಗೂ ಅಂತಾರಾಜ್ಯ ಸರಕು ಸಾಗಣೆ ವಾಹನಗಳಿಗೆ ತೊಂದರೆಯಾಯಿತು. ಪ್ರತಿಭಟನಾ ಸ್ಥಳಗಳ ಎರಡೂ ದಿಕ್ಕಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತವು. ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದರಾದರೂ ಕೆಲವೆಡೆ ಅಲ್ಲೂ ರೈತರು ರಸ್ತೆ ತಡೆದರು. ಹೀಗಾಗಿ, ಉತ್ತರ ಕರ್ನಾಟಕದ ಪ್ರಮುಖ ನಗರಗಳ ಮಾರ್ಗಗಳಲ್ಲಿ ಇಡೀ ದಿನ ಸಂಚಾರ ಅಸ್ತವ್ಯಸ್ತಗೊಂಡಿತು.
ಹೇಗಿತ್ತು ಪ್ರತಿಭಟನೆ ?
ಆತ್ಮಹತ್ಯೆ ಯತ್ನ
ಬೆಳಗಾವಿ ಜಿಲ್ಲೆ ಹತ್ತರಗಿ ಟೋಲ್ ಬಳಿ ರೈತರೊಬ್ಬರು ಟೋಲ್ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದರು. ಪೊಲೀಸರು ಅವರನ್ನು ತಡೆದರು.
ಹೆದ್ದಾರಿಯಲ್ಲೇ ಟೆಂಟ್..?
ಗದ್ದನಕೇರಿ ಕ್ರಾಸ್, ಯಲಗೂರ ಕ್ರಾಸ್ ಸೇರಿದಂತೆ ಹಲವು ಕಡೆ ರೈತರು ಹೆದ್ದಾರಿ ಮಧ್ಯೆಯೇ ಟೆಂಟ್ ಹಾಕಿ ಧರಣಿ ನಡೆಸಿದರು.
ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಬಳಕೆ..?
ರೈತರು ಎತ್ತು, ದನಕರುಗಳನ್ನು ರಸ್ತೆಯಲ್ಲಿಯೇ ಕಟ್ಟಿ, ಚಕ್ಕಡಿ ಮತ್ತು ಟ್ರ್ಯಾಕ್ಟರ್ಗಳನ್ನು ಅಡ್ಡವಾಗಿ ನಿಲ್ಲಿಸಿ ಸಂಚಾರ ಬಂದ್ ಮಾಡಿದರು.
ಬಾರುಕೋಲು, ಪೊರಕೆ ಪ್ರದರ್ಶನ..?
ಬೆಳಗಾವಿ ಜಿಲ್ಲೆಯ ಪ್ರತಿಭಟನಾ ಸ್ಥಳಗಳಲ್ಲಿ ರೈತರು ಬಾರುಕೋಲು ಮತ್ತು ಪೊರಕೆ ಹಿಡಿದು ಪ್ರತಿಭಟಿಸಿದರು. ಕೆಲವರು ರಸ್ತೆಯಲ್ಲಿಯೇ ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಕೃತಿ ದಹನ..?
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಕೆಲವು ಜನಪ್ರತಿನಿಧಿಗಳ ಪ್ರತಿಕೃತಿಗಳಿಗೆ ರೈತರು ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ಅಹೋರಾತ್ರಿ ಹೋರಾಟ..?
ಕಲಬುರಗಿ ರಾಮ ಮಂದಿರ ವೃತ್ತದಲ್ಲಿ ರೈತರು ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಘೋಷಿಸಿದರು.
ಎರಡು ದಿನ ಗಡುವು !
” ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ, ಅಗತ್ಯ ಬಿದ್ದರೆ ವಿಮಾನ ಸಂಚಾರಕ್ಕೂ ಅಡ್ಡಿಪಡಿಸಬೇಕಾದೀತು” – ಚೂನಪ್ಪ ಪೂಜಾರಿ, ಹಸಿರು ಸೇನೆ ರಾಜ್ಯಾಧ್ಯಕ್ಷ
” ಕೇಂದ್ರ ಕೃಷಿ ಸಚಿವ ಪ್ರಲ್ಹಾದ್ ಜೋಶಿ , ಸಚಿವ ಎಂ.ಆರ್. ಪಾಟೀಲ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರು ಒಟ್ಟಾಗಿ ಹೋಗಿ ಕೇಂದ್ರದ ಮನವೊಲಿಸಿ ರೈತರ ಬೇಡಿಕೆ ಈಡೇರಿಸಿದರೆ ಅವರನ್ನು ಸನ್ಮಾನಿಸಲಾಗುವುದು” – ಶಶಿಕಾಂತ ಗುರೂಜಿ, ರೈತ ಸಂಘದ ಗೌರವಾಧ್ಯಕ್ಷ
