Bail Movie-Shivarajkumar fans: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ – ನಿರ್ದೇಶಕ ಪವನ್ ಒಡೆಯರ್ ಮೊದಲ ಬಾರಿಗೆ ಒಂದಾಗಿರುವ ಸಿನಿಮಾ ‘ಬೇಲ್’. ಹೊಸ ಅವತಾರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕಾಣಿಸಿಕೊಂಡಿರುವ ಸಿನಿಮಾ ‘ಬೇಲ್’. ಶಿವಣ್ಣ – ಸಾಯಿ ಕುಮಾರ್ – ಜಯರಾಮ್.. ಮೂರೂ ಜನ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವುದು ‘ಬೇಲ್’ ಚಿತ್ರದಲ್ಲಿ. ಹಲವು ವಿಶೇಷತೆಗಳಿರುವ ‘ಬೇಲ್’ ಸಿನಿಮಾ ಹೇಗಿದೆ ಗೊತ್ತಾ?
ಸಾಲ್ಟ್ & ಪೆಪ್ಪರ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ‘ಬೇಲ್’ ಚಿತ್ರದಲ್ಲಿ ರಕ್ಷಕನೂ ಹೌದು, ರಾಕ್ಷಸನೂ ಹೌದು. ಹಾಗಂದ ಮಾತ್ರಕ್ಕೆ ಶಿವಣ್ಣ ಎಲ್ಲೂ ಅಬ್ಬರಿಸೋದಿಲ್ಲ. ವಯಸ್ಸಿಗೆ ತಕ್ಕನಾದ ಶಾಂತ, ಸಂಯಮ ಹಾಗೂ ಗಂಭೀರವಾದ ಅಭಿನಯ ನೀಡಿದ್ದಾರೆ ಶಿವಣ್ಣ. ಹೊಸ ಲುಕ್ ಮತ್ತು ಸ್ವಾಗ್ನಲ್ಲಿ ಶಿವಣ್ಣನ ನೋಡುವುದೇ ಒಂಥರಾ ಚೆಂದ.
ವಿಜಯ್ ಕುಮಾರ್ (ಶಿವರಾಜ್ ಕುಮಾರ್) ನಿವೃತ್ತ ಐಪಿಎಸ್ ಅಧಿಕಾರಿ. ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಗಾಯವನ್ನೂ ಮಾಡಿಕೊಳ್ಳದೆ ರಿಟೈರ್ ಆಗುವವರು ಪೊಲೀಸ್ ಕಮಿಷನರ್ ವಿಜಯ್ ಕುಮಾರ್. ಪಬ್ಲಿಕ್ ಲೈಫ್ನಲ್ಲಿ ಅಮ್ಮಾವ್ರ ಗಂಡ, ಮಿನಿಸ್ಟರ್ ಮಾವನಿಂದ ಪೋಸ್ಟ್ ಗಿಟ್ಟಿಸಿದವರು ಎಂಬ ಹೀಯಾಳಿಕೆ ವಿಜಯ್ ಕುಮಾರ್ಗೆ ಆಗಾಗ ಎದುರಾಗುತ್ತದೆ. ಇಂತಿಪ್ಪ ವಿಜಯ್ ಕುಮಾರ್ ಹೇಗೆಲ್ಲಾ ದುಷ್ಟ ಸಂಹಾರ ಮಾಡ್ತಾರೆ ಅನ್ನೋದೇ ‘ಬೇಲ್’ ಚಿತ್ರದ ಕಥೆ.
‘ಬೇಲ್’ ಚಿತ್ರದಲ್ಲಿ ನಿವೃತ್ತಿ ಹೊಂದಿರುವ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಮಗಳನ್ನ ಕಳೆದುಕೊಂಡ ಅಸಹಾಯಕ ತಂದೆಯಾಗಿ, ಮಗಳ ಸಾವಿಗೆ ನ್ಯಾಯ ಕೊಡಿಸುವ ಧೈರ್ಯಶಾಲಿಯಾಗಿ, ದುಷ್ಟ ಸಂಹಾರ ಮಾಡುವ ಧೀರನಾಗಿ ವಿಜಯ್ ಪಾತ್ರಕ್ಕೆ ಶಿವಣ್ಣ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ಶಿವಣ್ಣನ ಸಾಲ್ಟ್ & ಪೆಪ್ಪರ್ ಲುಕ್ ಇಷ್ಟವಾಗುತ್ತದೆ. ಶಿವಣ್ಣನ ಕಾಮಿಡಿ ಟೈಮಿಂಗ್ ಹಾಗೂ ಲಾಂಗ್ ಹಿಡಿಯುವ ರೀತಿ ಬಗ್ಗೆ ಕೆಮ್ಮಂಗಿಲ್ಲ.
ವಿಜಯ್ ಆತ್ಮೀಯ ಸ್ನೇಹಿತರಾಗಿ ಸಾಯಿ ಕುಮಾರ್ ಹಾಗೂ ಜಯರಾಮ್ ನಟಿಸಿದ್ದಾರೆ. ವಿಜ್ಞಾನಿ ರಾಬರ್ಟ್ ಪಾತ್ರದಲ್ಲಿ ಜಯರಾಮ್ ಅವರ ಕಾಮಿಡಿ ಟೈಮಿಂಗ್ ಇಷ್ಟವಾಗುತ್ತದೆ. ಇನ್ನೂ ನಿವೃತ್ತ ಜಡ್ಜ್ ಆಗಿ ಸಾಯಿ ಕುಮಾರ್ ಅವರ ಅಭಿನಯ ಸಹ ಚೆನ್ನಾಗಿದೆ.
ಅಜನೀಶ್ ಲೋಕನಾಥ್ ಅವರ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಚಿತ್ರಕಥೆಗೆ ವೇಗ ನೀಡಿದೆ. ವೈದಿ ಎಸ್ ಪಿಳ್ಳೈ ಕ್ಯಾಮರಾ ವರ್ಕ್ ಉತ್ತಮವಾಗಿ ಮೂಡಿಬಂದಿದೆ. ಸೆಕೆಂಡ್ ಹಾಫ್ನಲ್ಲಿ ಶಶಾಂಕ್ ನಾರಾಯಣ ಸಂಕಲನ ಇನ್ನೂ ಚುರುಕಾಗಿರಬೇಕಿತ್ತು. ಇನ್ನೂ ಅರ್ಜುನ್ ರಾಜ್ ಅವರ ಸ್ಟಂಟ್ಸ್ನಲ್ಲಿ ಅಬ್ಬರವಿಲ್ಲ.
ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಪವನ್ ಒಡೆಯರ್ ‘ಬೇಲ್’ ಚಿತ್ರದ ಮೂಲಕ ಗಂಭೀರವಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಪರ್ಯಾಯ ನ್ಯಾಯಾಂಗದ ಬಗ್ಗೆ ಬೆಳಕು ಚೆಲ್ಲುವ ‘ಬೇಲ್’ ಚಿತ್ರದ ಕಥೆಯಲ್ಲಿ ಲವ್, ಥ್ರಿಲ್ಲರ್, ಸೈನ್ಸ್, ಕ್ರೈಮ್, ಆಕ್ಷನ್, ರಿವೆಂಜ್.. ಎಲ್ಲವನ್ನೂ ಹದವಾಗಿ ಬೆರೆಸಿದ್ದಾರೆ ಪವನ್ ಒಡೆಯರ್.
ಶಿವಣ್ಣನ ಅಭಿಮಾನಿಗಳಿಗೆ ‘ಬೇಲ್’ ಸಿನಿಮಾ ಖಂಡಿತವಾಗಿಯೂ ರಸದೌತಣ. ಹೊಸ ಲುಕ್ನಲ್ಲಿ, ಹೊಸ ಖದರ್ನಲ್ಲಿ ಶಿವಣ್ಣನನ್ನ ನೋಡಬಯಸುವ ಅಭಿಮಾನಿಗಳಿಗೆ ‘ಬೇಲ್’ ಹೇಳಿ ಮಾಡಿಸಿದ ಸಿನಿಮಾ. ಪವನ್ ಒಡೆಯರ್ – ಶಿವಣ್ಣ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ‘ಬೇಲ್’ ಚಿತ್ರ ಅಭಿಮಾನಿಗಳನ್ನ ನಿರಾಸೆ ಮಾಡುವುದಿಲ್ಲ.
