Udupi: Massive accident near Kollur Mukambika temple; A huge light set fell on the devotees!–ರಭಸವಾಗಿ ಗಾಳಿ ಬೀಸಿದ ಪರಿಣಾಮ, ಲೈಟ್ ಸೆಟ್ ಕಟ್ಟಡದ ಮೇಲಿಂದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ನೇರವಾಗಿ ಉರುಳಿ ಬಿದ್ದಿದೆ.
ಉಡುಪಿ ಅ.14 ರಂದು ನವರಾತ್ರಿ ಸಂಭ್ರಮದ ನಡುವೆಯೇ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಭಾರಿ ದುರಂತ ಸಂಭವಿಸಿದೆ. ದೇವಸ್ಥಾನದ ಎದುರು ಅಳವಡಿಸಲಾಗಿದ್ದ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್ ಏಕಾಏಕಿ ಭಕ್ತರ ಮೇಲೆ ಬಿದ್ದ ಪರಿಣಾಮ ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಘಟನೆ ನಡೆದಿದೆ.
ಭಕ್ತರ ಮೇಲೆ ಬಿತ್ತು ಲೈಟ್ ಸೆಟ್!: ವಾಣಿಜ್ಯ ಸಂಕೀರ್ಣದ ಬಳಿ ಹಲವು ಭಕ್ತಾದಿಗಳು ನಿಂತುಕೊಂಡಿದ್ದರು. ನವರಾತ್ರಿ ಉತ್ಸವದ ವಿಶೇಷ ಅಲಂಕಾರಕ್ಕಾಗಿ ಕಟ್ಟಡದ ಮಹಡಿಯ ಮೇಲೆ ಬೃಹತ್ ಗಾತ್ರದ ಲೈಟ್ ಸೆಟ್ಗಳನ್ನು ಅಳವಡಿಸಲಾಗಿತ್ತು. ಈ ವೇಳೆ ರಭಸವಾಗಿ ಗಾಳಿ ಬೀಸಿದ ಪರಿಣಾಮ, ಲೈಟ್ ಸೆಟ್ ಕಟ್ಟಡದ ಮೇಲಿಂದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ನೇರವಾಗಿ ಉರುಳಿ ಬಿದ್ದಿದೆ. ಲೈಟ್ ಸೆಟ್ ಬೀಳುತ್ತಿದ್ದಂತೆಯೇ ಕೆಲವು ಭಕ್ತರು ತಕ್ಷಣವೇ ಅಡಿಯಿಂದ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಯೋವೃದ್ಧನ ತಲೆ ಮೇಲೆ ಬಿತ್ತು ಲೈಟ್: ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆಯೇ ಲೈಟ್ ಸೆಟ್ ಬಿದ್ದಿದ್ದರಿಂದ, ಅವರಿಗೆ ಮೇಲೇಳಲು ಸಾಧ್ಯವಾಗದೆ ಒದ್ದಾಡಿದ್ರು. ತಕ್ಷಣ ಸಾರ್ವಜನಿಕರು ಸಹಾಯಕ್ಕೆ ಬಂದಿದ್ರು. ತೀವ್ರವಾಗಿ ಗಾಯಗೊಂಡಿದ್ದರ ವಯೋವೃದ್ಧರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕ್ಷೇತ್ರದಲ್ಲಿ ನೆರೆದಿರುವಾಗ ಇಂತಹ ತಾತ್ಕಾಲಿಕ ಲೈಟಿಂಗ್ ಹಾಗೂ ಬ್ಯಾನರ್ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಒಂದೇ ಸಮನೇ ಗಾಳಿ ಬೀಸಿದ ಪರಿಣಾಮ ಕಟ್ಟಡ ಮೇಲಿಂದ ಲೈಟ್ ಉರುಳಿದಿದೆ. ಬಿಸಿಲಿನ ಹಿನ್ನೆಲೆಯಲ್ಲಿ ಕಟ್ಟಡ ನೆರಳಿನಡಿ ನಿಂತಿದ್ದವರ ಮೇಲೆ ಬಿದ್ದಿದೆ. ಮೂವರು ಭಕ್ತರ ಮೇಲೆಯೇ ಒರಗಿ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಗಂಭೀರ ಗಾಯಗೊಂಡ ವಯೋವೃದ್ದನನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದಸರಾ ಮಹೋತ್ಸವವು ಅತ್ಯಂತ ವೈಭವ ಮತ್ತು ಭಕ್ತಿಯಿಂದ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿರುವ ಈ ಪವಿತ್ರ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಪೂಜೆಗಳು ಮತ್ತು ಆಲಂಕಾರಗಳು ನಡೆಯುತ್ತವೆ.

