One government job for every family, government job service period to be 15 years instead of 35 years: H.D. Kumaraswamy’s new idea: – ಬೆಂಗಳೂರು : ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿ ಮತ್ತು ಮಿತಿಮೀರಿದ ಭ್ರಷ್ಟಾಚಾರದ ಕುರಿತಂತೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಸಂಸ್ಥೆಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಹಾಗೂ ಸರ್ಕಾರಿ ಉದ್ಯೋಗಗಳ ನೇಮಕದಲ್ಲಿ ತಮಗಿರುವ ಹೊಸ ಆಲೋಚನೆಯನ್ನು ಮುಂದಿಡುವುದರ ಮೂಲಕ, ಮುಂಬರುವ ವಿಧಾನಸಭೆ ಚುನಾವಣಾಗೆ ಭರ್ಜರಿ ಸಿದ್ದತೆಗಳನ್ನು ಪ್ರಾರಂಭಿಸಿದ್ದಾರೆ.
ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಿ ಎಂದು ಮಾತು ಶುರು ಮಾಡಿದ ಕುಮಾರಸ್ವಾಮಿ, ಒಮ್ಮೆ ಒಬ್ಬರು ಸರಕಾರಿ ಉದ್ಯೋಗಕ್ಕೆ ನೇಮಕವಾದರೆ ಅವರಿಗೆ 35 ವರ್ಷ ಸೇವಾವಧಿ ಇರುತ್ತದೆ. ಆದರೆ ಪ್ರತೀ ಕುಟುಂಬಕ್ಕೆ ತಲಾ ಒಂದು ಉದ್ಯೋಗ ಕಲ್ಪಿಸುವ ಉದ್ದೇಶದಿಂದ 35 ವರ್ಷದ ಸೇವಾವಧಿ ಬದಲಿಗೆ 10ರಿಂದ 15 ಅಥವಾ 20 ವರ್ಷಕ್ಕೆ ಇಳಿಸಬೇಕು. ಇಷ್ಟು ಮಿತಿಯನ್ನು ಹಾಕುವ ಮೂಲಕ ಉದ್ಯೋಗಗಳನ್ನು ಎಲ್ಲರಿಗೂ ಕೊಡುವ ಪ್ರಯತ್ನ ಮಾಡಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.
ಕೆಲಸದಿಂದ ನಿವೃತ್ತಿಯಾಗುವ ಉದ್ಯೋಗಿ ನಿವೃತ್ತಿ ಆದ ನಂತರ ದೊರೆಯುವ ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳಿಗೆ ಅರ್ಹನಾಗಿರುತ್ತಾನೆ. ಇದರಿಂದ ಉದ್ಯೋಗ ಸಿಗದೇ ಇರುವವರಿಗೆ ಅವಕಾಶ ದೊರೆಯುತ್ತದೆ ಹಾಗೂ ನಿರುದ್ಯೋಗ ನಿವಾರಣೆಯಲ್ಲಿ ದೊಡ್ಡ ಪ್ರಯತ್ನ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.
Madhu Bangarappa: ಮುಂದಿನ ವರ್ಷದಿಂದ PUC ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ಜೊತೆಗೆ ನೋಟ್ಬುಕ್ಗಳ ವಿತರಣೆ- ಸಚಿವ ಮಧು ಬಂಗಾರಪ್ಪ
ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನಾನು ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ ಎಂದು ಹೇಳುವುದರ ಮೂಲಕ ಮುಂದಿನ ಚುನಾವಣೆ ತಯಾರಿ ಇದಾಗಿದೆ ಎಂದು ಪರೋಕ್ಷವಾಗಿ ತಿಳಿಸಿದರು. ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಇಂಥ ಯೋಚನೆ ಕಾರ್ಯರೂಪಕ್ಕೆ ಬಂದರೆ ಹೇಗೆ ಎಂದು ನಾನು ಆಲೋಚನೆ ಮಾಡುತ್ತಿದ್ದೇನೆ. ನನ್ನ ಪ್ರಕಾರ ಪ್ರತಿ ಮನೆಗೂ ಕನಿಷ್ಠ ಒಂದು ಸರ್ಕಾರಿ ಕೆಲಸವಾದರೂ ದೊರೆಯಬೇಕು. ನನ್ನ ಆಲೋಚನೆಯನ್ನು ಜನರ ಮುಂದೆ ಇರಿಸಿದ್ದೇನೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲಿ ಎಂದು ಸಚಿವರು ಹೇಳಿದರು.
ಅಗಾಧ ಪ್ರಮಾಣದಲ್ಲಿರುವ ನಿರುದ್ಯೋಗ: ನಮ್ಮಲ್ಲಿ ನಿರುದ್ಯೋಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರಕಾರಿ ಮಟ್ಟದಲ್ಲಿ ಸಮರ್ಥರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಪಾರದರ್ಶತವಾಗಿ, ನ್ಯಾಯ ಸಮ್ಮತವಾಗಿ ಅರ್ಹರನ್ನು ಆಯ್ಕೆ ಮಾಡಿ ಸರ್ಕಾರಿ ಸೇವೆಗೆ ಕಳಿಸಬೇಕಾದ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದೆ. ಹಣಕ್ಕಾಗಿ ಉದ್ಯೋಗವನ್ನು ಮಾರಿಕೊಳ್ಳಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಂಸ್ಥೆಗೆ ಹೋಗುವ ಅಧಿಕಾರಿಗಳು ಕೂಡ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಸಚಿವರು ದೂರಿದರು.
ಕೆಪಿಎಸ್ಸಿ ಕಾರ್ಯವೈಖರಿ ಬಗ್ಗೆ ಯುವಜನರ ಆಕ್ರೋಶ: ಈ ಸಂದರ್ಭದಲ್ಲಿ ಅನೇಕ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಚಿವರಲ್ಲಿ ದೂರುಗಳನ್ನು ಹೇಳಿಕೊಂಡರು. ಪರೀಕ್ಷಾ ವಿಧಾನ, ತಪ್ಪು ತಪ್ಪಾಗಿ ಮುದ್ರಣವಾಗುವ ಪ್ರಶ್ನೆ ಪತ್ರಿಕೆಗಳು, ಒಂಎಂಆರ್ ಶೀಟುಗಳ ತಿದ್ದುಪಡಿ ಸೇರಿದಂತೆ ಅನೇಕ ಅಕ್ರಮಗಳನ್ನು ಎಸಗಲಾಗಿದೆ ಎಂದು ಹೇಳಿದರು.
