Deepavali Crackers: Shocking news for cracker lovers! This time Diwali is guaranteed to cost you a fortune! What is the reason? – ಈ ಬಾರಿ ಉತ್ಪಾದನೆಯಲ್ಲಿ ಬಳಕೆಯಾಗುವ ರಸಾಯನಗಳ ಬೆಲೆ ಹೆಚ್ಚಾಗಿರುವುದರಿಂದ ತಯಾರಕರ ವೆಚ್ಚ ಹೆಚ್ಚಾಗಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಸಂಭ್ರಮ ಮನೆ ಮಾಡಿದೆ. ಜನರು ದೀಪಾವಳಿ ಹಬ್ಬದ ವೇಳೆ ಕೇವಲ ದೀಪವನ್ನು ಬೆಳಗಿಸೋದು ಮಾತ್ರವಲ್ಲದೇ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ, ಪಟಾಕಿ ಪ್ರಿಯರಿಗೆ ಈ ಬಾರಿ ಶಾಕಿಂಗ್ ಸುದ್ದಿಯೊಂದು ಕಾದಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಹಾಗೂ ಕಾರ್ಖಾನೆಗಳ ಮೇಲೆ ಕಠಿಣ ಸುರಕ್ಷತಾ ತನಿಖೆ ನಡೆಯುತ್ತಿರುವುದರಿಂದ, ಈ ವರ್ಷ ಪಟಾಕಿಗಳ ಬೆಲೆ ಶೇಕಡಾ 15 ರಿಂದ 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಭಾರತದಲ್ಲಿ ಪಟಾಕಿ ಉತ್ಪಾದನೆಯ ಪ್ರಮುಖ ಕೇಂದ್ರವು ತಮಿಳುನಾಡಿನ ಶಿವಕಾಶಿ ಆಗಿದೆ. ಇಲ್ಲಿ ತಯಾರಾಗುವ ಪಟಾಕಿಗಳನ್ನು ದೇಶದ ವಿವಿಧ ಭಾಗಗಳಿಗೆ ಪೂರೈಸಲಾಗುತ್ತದೆ. ಈ ಬಾರಿ ಉತ್ಪಾದನೆಯಲ್ಲಿ ಬಳಕೆಯಾಗುವ ರಸಾಯನಗಳ ಬೆಲೆ ಹೆಚ್ಚಾಗಿರುವುದರಿಂದ ತಯಾರಕರ ವೆಚ್ಚ ಹೆಚ್ಚಾಗಿದೆ.
ವರದಿಗಳ ಪ್ರಕಾರ, ಸಲ್ಫರ್ ಬೆಲೆಯು ಒಂದು ಸಮಯದಲ್ಲಿ ಪ್ರತಿ ಕೆಜಿಗೆ 75 ರೂಪಾಯಿಯಿಂದ 140 ರೂಪಾಯಿಗೆ ಏರಿಕೆಯಾಗಿತ್ತು. ನಂತರ ಇದರಲ್ಲಿ ಸ್ವಲ್ಪ ಇಳಿಕೆಯಾಗಿ ಬೆಲೆಯು ಪ್ರತಿ ಕೆಜಿಗೆ ಸುಮಾರು 100 ರೂಪಾಯಿ ಆಗಿದೆ. ಇದರೊಂದಿಗೆ ಅಲ್ಯೂಮಿನಿಯಂ, ಸೋಡಿಯಂ ನೈಟ್ರೇಟ್ ಮತ್ತು ಇತರ ಅಗತ್ಯ ಸಾಮಗ್ರಿಗಳು ಕೂಡ ಸುಮಾರು ಶೇಕಡಾ 30 ರಷ್ಟು ಹೆಚ್ಚಾಗಿದೆ.
ಪಟಾಕಿ ತಯಾರಕರ ಎದುರು ಕೇವಲ ದುಬಾರಿ ಕಚ್ಚಾ ವಸ್ತುವಿನ ಸಮಸ್ಯೆ ಮಾತ್ರ ಇಲ್ಲ. ಗಲ್ಫ್ ಪ್ರದೇಶದಲ್ಲಿ ಶಿಪ್ಪಿಂಗ್ಗೆ ಸಂಬಂಧಿಸಿದ ಅಡೆತಡೆಗಳಿಂದಾಗಿ ಸಲ್ಫರ್ ಮತ್ತು ಕೆಲ ಪದಾರ್ಥಗಳ ಪೂರೈಕೆಯಲ್ಲಿಯೂ ವಿಳಂಬವಾಗಿದೆ. ಸಾಮಗ್ರಿಗಳು ತಲುಪಲು ಹೆಚ್ಚು ಸಮಯ ಹಿಡಿಯುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಪಟಾಕಿ ತಯಾರಿಕೆಯ ವೆಚ್ಚದಲ್ಲಿ ಸುಮಾರು ಶೇಕಡಾ 15 ರಷ್ಟು ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಸುರಕ್ಷತಾ ತನಿಖೆಯಿಂದ ಉತ್ಪಾದನೆಯ ಮೇಲೆ ಒತ್ತಡ?: ಅಲ್ಲದೇ ಸರ್ಕಾರಿ ಅಧಿಕಾರಿಗಳು ಪಟಾಕಿ ಕಾರ್ಖಾನೆಗಳಲ್ಲಿ ಸುರಕ್ಷತಾ ನಿಯಮಗಳ ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ 10 ತಿಂಗಳುಗಳಲ್ಲಿ 24 ಅಪಘಾತಗಳಲ್ಲಿ 41 ಜನರು ಸಾವನ್ನಪ್ಪಿ ಮತ್ತು 39 ಜನರು ಗಾಯಗೊಂಡ ನಂತರ 700 ಕ್ಕೂ ಹೆಚ್ಚು ಘಟಕಗಳ ಪರಿಶೀಲನೆ ನಡೆಸಲಾಗಿದೆ. ಅಪಾಯಕಾರಿ ಸಾಮಗ್ರಿಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪಟಾಕಿಗಳಿಗೆ ಹೆಚ್ಚು ಹಣ ತೆರಬೇಕಾಗಬಹುದು?: ಅಕ್ಟೋಬರ್ ಎರಡನೇ ವಾರದಲ್ಲಿ ಮಾರುಕಟ್ಟೆಯಲ್ಲಿ 10 ಫೌಂಟೇನ್ ಪ್ಯಾಕೆಟ್ ಬೆಲೆ ಸುಮಾರು 55 ರೂಪಾಯಿ, 10 ಸ್ಪೆಷಲ್ ಗ್ರೌಂಡ್ ಸ್ಪಿನ್ನರ್ ಬೆಲೆ 80 ರೂಪಾಯಿ ಮತ್ತು ಐದು ರಾಕೆಟ್ಗಳ ಬೆಲೆ 70 ರೂಪಾಯಿ ಎಂದು ತಿಳಿಸಲಾಗಿದೆ. ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾದಂತೆ ಬೆಲೆಗಳು ಇನ್ನಷ್ಟು ಏರಬಹುದು ಎಂದು ಅಂದಾಜಿಸಲಾಗಿದ್ದು, ಹೆಚ್ಚಿದ ವೆಚ್ಚದಿಂದಾಗಿ ಈ ಬಾರಿ ಗ್ರಾಹಕರು ಪಟಾಕಿ ಖರೀದಿಸಲು ಹೆಚ್ಚಿನ ಬಜೆಟ್ ಇಟ್ಟುಕೊಳ್ಳಬೇಕಾಗುತ್ತದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
