Even after 6 months of selling, farmers still owe Rs. 265 crore for millet: Farmers lament government’s delay amid drought and price hike! : ಕರ್ನಾಟಕದಲ್ಲಿ ಮಳೆ ಅಭಾವದಿಂದ 101 ತಾಲೂಕುಗಳಲ್ಲಿ ಬರಗಾಲ, ಬೆಲೆ ಏರಿಕೆ ಆವರಿಸಿದ್ದು, ರೈತರು ಕಂಗಾಲಾಗಿದ್ದಾರೆ. ಇದರ ನಡುವೆ 2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ್ದ 14 ಜಿಲ್ಲೆಗಳ 25,413 ರೈತರಿಗೆ ಸೇರಬೇಕಾದ 265 ಕೋಟಿ ರೂ. ಬಾಕಿ ಉಳಿದಿರುವುದು ಗಾಯದ ಮೇಲೆ ಎಳೆದಂತಾಗಿದೆ. ಕ್ವಿಂಟಾಲ್ಗೆ 4,886 ರೂ. ರಂತೆ ರಾಗಿ ಮಾರಾಟ ಮಾಡಿ 6 ತಿಂಗಳು ಕಳೆದರೂ ಖಾತೆಗೆ ಹಣ ತಲುಪಿಲ್ಲ. ಅದರಲ್ಲೂ ತುಮಕೂರು ಹಾಗೂ ಹಾಸನ ಜಿಲ್ಲೆಗಳ ರೈತರಿಗೆ ಅತಿ ಹೆಚ್ಚು ಹಣ ಬಾಕಿಯಿದೆ. ಇದರಿಂದ ಆಕ್ರೋಶಗೊಂಡಿರುವ ರಾಗಿ ಬೆಳೆಗಾರರು ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿ 6 ತಿಂಗಳಾದ್ರೂ ಬೆಳೆಗಾರರ ಕೈ ಸೇರಿಲ್ಲ ರಾಗಿ ಹಣ.
- ಬರ, ಬೆಲೆ ಏರಿಕೆ ನಡುವೆ ರಾಗಿ ಬಾಕಿ ಹಣ ನೀಡದೆ ಸರ್ಕಾರದಿಂದ ವಿಳಂಬ ಧೋರಣೆಗೆ ರಾಗಿ ಬೆಳೆಗಾರರು ಕಂಗಾಲು.
- ಕೂಡಲೇ ರಾಗಿ ಹಣ ಖಾತೆಗಳಲ್ಲಿ ಜಮೆ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ರೈತಪರ ಸಂಘಟನೆಗಳ ಎಚ್ಚರಿಕೆ.
![]()
ಚಿಕ್ಕಮಗಳೂರು: ರಾಜ್ಯದ 101 ತಾಲೂಕುಗಳಲ್ಲಿ ಬರ ಆವರಿಸಿದೆ. ಬಿತ್ತಿದ ಬೀಜ ಮೊಳಕೆಯೊಡೆಯದೆ ರೈತರು ಕಂಗಾಲಾಗಿದ್ದಾರೆ. ಇದರ ನಡುವೆ 2025-26ರಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ್ದ 14 ಜಿಲ್ಲೆಗಳ 25,413 ರೈತರಿಗೆ ಬರಬೇಕಾದ 265 ಕೋಟಿ ರೂ. ಬಾಕಿ ಉಳಿದುಕೊಂಡಿ ರುವುದು ಬರದಲ್ಲಿ ಬರೆ ಎಳೆದಂತಾಗಿದೆ.
ಮುಂಗಾರಿನ ಮುನಿಸಿನಿಂದ ರಾಜ್ಯದ 190 ತಾಲೂಕುಗಳ ಪೈಕಿ 101 ತಾಲೂಕುಗಳಲ್ಲಿ ಬರ ನಿರ್ಮಾಣವಾಗಿದೆ. ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ 2025-26ರಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮತಿನೀಡಿತ್ತು. ಅದರಂತೆ 15 ಜಿಲ್ಲೆಗಳ 2,46,605 ರೈತರಿಂದ ಪ್ರತಿ ಕ್ವಿಂಟಾಲ್ಗೆ 4,886 ರೂ.ನಂತೆ ಒಟ್ಟು 2,500 ಕೋಟಿಗೂ ಅಧಿಕ ಮೌಲ್ಯದ 5,69,331 ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಕೇಂದ್ರಗಳ ಮೂಲಕ ನೋಡಲ್ ಏಜೆನ್ಸಿಗಳಿಗೆ ಮಾರಾಟ ಮಾಡಿತ್ತು. ಇದರಲ್ಲಿ ಈವರೆಗೆ ಸರ್ಕಾರ 2.21 ಲಕ್ಷ ರೈತರಿಗೆ ಹಣ ಪಾವತಿಸಿದ್ದು, 25,413 ರೈತರಿಗೆ ಪಾವತಿಸಬೇಕಾದ 265 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
6 ತಿಂಗಳಾದರೂ ಬಾರದ ಹಣ: ರಾಗಿ ರಾಜ್ಯದ ಅರೆ ಮಲೆನಾಡು ಹಾಗೂ ಬಯಲು ಭಾಗದ ಪ್ರಮುಖ ಬೆಳೆ. ಇಲ್ಲಿನ ಲಕ್ಷಾಂತರ ರೈತರು ವರ್ತಕರಿಗೆ ರಾಗಿಯನ್ನು ಮಾರಾಟ ಮಾಡದೇ ಸರ್ಕಾರದ ಖರೀದಿ ಕೇಂದ್ರಗಳ ಬಳಿ ಹಗಲು-ರಾತ್ರಿ ಕಾದುಕುಳಿತು ರಾಗಿಯನ್ನು ಮಾರಾಟ ಮಾಡಿದ್ದರು.
ಕಳೆದ ಮಾರ್ಚ್ ನಲ್ಲಿ ಮಾರಾಟ ಮಾಡಿದ್ದು ಶೀಘ್ರ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಗಣೇಶ ಚತುರ್ಥಿ ಬಂದರೂ ಸಹ ರಾಜ್ಯದ 25000 ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಈ ಬಾರಿ ಮಳೆ ಕೈ ಕೊಟ್ಟ ಪರಿಣಾಮ ಪರ್ಯಾಯ ಬೆಳೆಗಳು ಸಹ ರೈತರ ಕೈ ಹಿಡಿದಿಲ್ಲ. ಈಗ ರಾಗಿಯ ಹಣವೂ ಜಮೆಯಾಗದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಗಿ ಹಣ ಬಾಕಿ ಇರುವ ಪ್ರಮುಖ ಜಿಲ್ಲೆಗಳು
| ಜಿಲ್ಲೆ | ರೈತರು | ಬಾಕಿ ಮೊತ್ತ (ಕೋಟಿ ರೂ.) |
| ತುಮಕೂರು | 10,146 | 103.88 |
| ಹಾಸನ | 5,440 | 56.39 |
| ಮೈಸೂರು | 2,648 | 26.62 |
| ಚಿಕ್ಕಮಗಳೂರು | 2,499 | 27.20 |
| ಚಿತ್ರದುರ್ಗ | 2,109 | 23.98 |
| ಮಂಡ್ಯ | 2,074 | 22.45 |
“ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಗಿ ಮಾರಾಟ ಮಾಡಿ 6 ತಿಂಗಳಾದರೂ ರೈತರ ಖಾತೆಗೆ ಹಣ ಪಾವತಿಯಾಗದಿರುವುದು ಖಂಡನೀಯ, ಎರಡೂರು ದಿನಗಳಲ್ಲಿ ಬಾಕಿ ಪಾವತಿಸದಿದ್ದರೆ ಹೋರಾಟಕ್ಕೆ ಕರೆ ನೀಡಲಾಗುವುದು.”
