Rice shortage in Karnataka due to drought: More than 2,400 rice mills on the verge of shutdown, foreign rice exports also hit hard! – ಕರ್ನಾಟಕದಲ್ಲಿ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಎದುರಾಗಿರುವ ಬರದ ನೇರವಾಗಿ ಭತ್ತ ಬಿತ್ತನೆಯ ಮೇಲೆ ಎಫೆಕ್ಟ್ ನೀಡಿದ್ದು, ಬಿತ್ತನೆ ಶೇ.50ಕ್ಕೂ ಹೆಚ್ಚು ಕುಸಿದಿದೆ. ಇದರ ಜೊತೆಗೆ ನೀರಿಲ್ಲದೆ, ಭತ್ತದ ಇಳುವರಿ ಕುಸಿತವಾಗಿದೆ. ಪರಿಣಾಮ ರಾಜ್ಯದ 2,400ಕ್ಕೂ ಅಧಿಕ ರೈಸ್ಮಿಲ್ಗಳಲ್ಲಿ ಅಕ್ಕಿ ಉತ್ಪಾದನೆ ಶೇ.20ಕ್ಕೆ ಇಳಿಕೆಯಾಗಿದ್ದು, ದುಬೈ, ಅಮೆರಿಕ, ಸಿಂಗಾಪುರಗಳಿಗೆ ಆಗುತ್ತಿದ್ದ ಅಕ್ಕಿ ರಫ್ತು ಬಹುತೇಕ ಬಂದ್ ಆಗಿದೆ. ಈ ಹಿನ್ನಲೆಯಲ್ಲಿ ವಿದೇಶಿ ವ್ಯಾಪಾರಿಗಳು ಬೇರೆ ರಾಜ್ಯಗಳತ್ತ ಮುಖ ಮಾಡಿದ್ದರೆ, ಇತ್ತ ರಾಜ್ಯದಲ್ಲಿ ಗಿರಣಿ ವಹಿವಾಟು ಶೇ.70ರಷ್ಟು ಕುಸಿದಿದ್ದು ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
- ಕರ್ನಾಟಕದಲ್ಲಿ ಬರದಿಂದ ಭತ್ತ ಬಿತ್ತನೆ ಶೇ.50ಕ್ಕೂ ಅಧಿಕ ಕುಸಿತ
- ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 2,400ಕ್ಕೂ ಅಧಿಕ ರೈಸ್ ಮಿಲ್
- ರೈಸ್ಮಿಲ್ಗಳಿಂದ ದೇಶ, ವಿದೇಶಕ್ಕೂ ಅಕ್ಕಿ ರಫ್ತು ಸ್ಥಗಿತ, ಉತ್ಪಾದನೆ, ರಫ್ತು ಇಳಿಕೆಯಿಂದ ಕಾರ್ಮಿಕರು ಅತಂತ್ರ

ಬಳ್ಳಾರಿ: ರಾಜ್ಯದಲ್ಲಿ ಮಳೆ ಕೈಕೊಟ್ಟು ತೀವ್ರ ಬರ ಆವರಿಸಿರುವ ಪರಿಣಾಮ ಕೃಷಿ ಚಟುವಟಿಕೆಗಳ ಜತೆಗೆ ಅಕ್ಕಿ ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಭತ್ತದ ಆವಕ ಕುಸಿದಿರುವುದರಿಂದ ರಾಜ್ಯದ 2,400ಕ್ಕೂ ಅಧಿಕ ರೈಸ್ಮಿಲ್ಗಳು ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಸಹಸ್ರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬರುವಂತಾಗಿದೆ.
ಮಳೆ ಹಾಗೂ ನೀರಾವರಿ ಕೊರತೆಯಿಂದ ಭತ್ತದ ಬಿತ್ತನೆ ಪ್ರದೇಶ ಈ ಬಾರಿ ಶೇ.50ಕ್ಕೂ ಅಧಿಕ ಕುಸಿದಿದೆ. ಕಲ್ಯಾಣ ಕರ್ನಾಟಕದ ‘ಭತ್ತದ ಕಣಜ’ವೆಂದೇ ಕರೆಯಲ್ಪಡುವ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ಸತತ ಎರಡು ಹಂಗಾಮುಗಳಲ್ಲಿ ಭತ್ತದ ನಾಟಿ ಗಣನೀಯ ಇಳಿಕೆಯಾಗಿದೆ. ಇದರಿಂದ ಅಕ್ಕಿ ಉತ್ಪಾದನೆಗೆ ಅಗತ್ಯವಿರುವ ಭತ್ತ ರೈಸ್ಮಿಲ್ಗಳಿಗೆ ತಲುಪುತ್ತಿಲ್ಲ.
ಶೇ.20ರಷ್ಟು ಮಾತ್ರ ಉತ್ಪಾದನೆ: ರಾಜ್ಯದಲ್ಲಿ 2,400ಕ್ಕೂ ಅಧಿಕ ರೈಸ್ಮಿಲ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಬೃಹತ್ ಹಾಗೂ ಮಧ್ಯಮ ಸೇರಿ ಸುಮಾರು 300 ಮಿಲ್ಗಳಿವೆ. ರಾಯಚೂರು, ಕೊಪ್ಪಳ ಹಾಗೂ ತುಮಕೂರು ತಲಾ 100, ದಾವಣಗೆರೆ ಸುಮಾರು 50 ಮಿಲ್ಗಳನ್ನು ಹೊಂದಿದ್ದು, ಮಂಡ್ಯ, ಮೈಸೂರು, ಹಾಸನ ಸೇರಿ ಹಲವು ಜಿಲ್ಲೆಗಳಲ್ಲೂ ಅಕ್ಕಿ ಗಿರಣಿಗಳಿವೆ. ಸಾಮಾನ್ಯವಾಗಿ ಪ್ರತಿ ಮಿಲ್ನಲ್ಲಿ ದಿನಕ್ಕೆ 30ರಿಂದ 50 ಟನ್ ಅಕ್ಕಿ ಉತ್ಪಾದಿಸಲಾಗುತ್ತಿತ್ತು. ಆದರೆ, ಭತ್ತದ ಆವಕ ಕುಸಿದಿರುವುದರಿಂದ ಈಗ ದಿನಕ್ಕೆ 2ರಿಂದ 3 ಟನ್ ಮಾತ್ರ ಉತ್ಪಾದನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಸಾಮರ್ಥ್ಯದ ಶೇ.20ರಷ್ಟು ಮಾತ್ರ ಅಕ್ಕಿ ಉತ್ಪಾದನೆಯಾಗುತ್ತಿದೆ ಎಂದು ಮಿಲ್ ಮಾಲೀಕರು ತಿಳಿಸಿದ್ದಾರೆ.
ವಿದೇಶಿ ರಫ್ತಿಗೂ ಹೊಡೆತ: ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಅಕ್ಕಿ ದೇಶದ ವಿವಿಧೆಡೆಗೆ ಪೂರೈಕೆಯಾಗುವುದರ ಜತೆಗೆ ದುಬೈ, ದಕ್ಷಿಣ ಆಫ್ರಿಕಾ, ಅಮೆರಿಕ, ಒಮನ್, ಶ್ರೀಲಂಕಾ, ಸಿಂಗಾಪುರ ಸೇರಿ ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಆದರೆ, ಈ ಬಾರಿ ಭತ್ತದ ಕೊರತೆಯಿಂದ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಅಕ್ಕಿಗಾಗಿ ವಿದೇಶಿ ವ್ಯಾಪಾರಿಗಳು ಉತ್ತರ ಪ್ರದೇಶ, ಗುಜರಾತ್, ಪಂಜಾಬ್ ಹಾಗೂ ಛತ್ತೀಸ್ಗಢದತ್ತ ಮುಖಮಾಡಿದ್ದಾರೆ. ಇದರಿಂದ ರಾಜ್ಯಕ್ಕೆ ಬರುತ್ತಿದ್ದ ವಿದೇಶಿ ವಿನಿಮಯಕ್ಕೂ ಮತ್ತು ಸ್ಥಳೀಯ ಆರ್ಥಿಕ ವಹಿವಾಟಿಗೂ ಪೆಟ್ಟು ಬಿದ್ದಿದೆ.
ವಹಿವಾಟು ಗಣನೀಯ ಕುಸಿತ : ಸಾಮಾನ್ಯವಾಗಿ ಮಧ್ಯಮ ಹಾಗೂ ಬೃಹತ್ ರೈಸ್ಮಿಲ್ಗಳು ವರ್ಷಕ್ಕೆ 50ರಿಂದ 100 ಕೋಟಿ ರೂ. ವಹಿವಾಟು ನಡೆಸುತ್ತಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ 15ರಿಂದ 30 ಕೋಟಿ ರೂ.ಗಳಿಗೆ ಕುಸಿದಿದೆ. ವಿದ್ಯುತ್ ಶುಲ್ಕ, ನಿರ್ವಹಣಾ ವೆಚ್ಚ, ಕಾರ್ಮಿಕರ ವೇತನ ಹಾಗೂ ಸಾಗಣೆ ವೆಚ್ಚ ಭರಿಸುವುದೇ ಉದ್ಯಮಿಗಳಿಗೆ ಸವಾಲಾಗಿದೆ. ಮತ್ತೊಂದೆಡೆ ಭತ್ತ ಒಣಗಿಸುವುದು, ಅಕ್ಕಿ ಉತ್ಪಾದನೆ, ಪ್ಯಾಕಿಂಗ್, ಲೋಡಿಂಗ್ ಹಾಗೂ ಸಾಗಣೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರ ಮೇಲೂ ಪರಿಣಾಮ ಬೀರಿದೆ. ಉತ್ಪಾದನೆ ಕುಸಿದಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಕೆಲವೆಡೆ ವೇತನ ಪಾವತಿಗೂ ತೊಂದರೆ ಉಂಟಾಗಿದೆ.
“ಬರದಿಂದ ರಾಜ್ಯದ ರೈಸ್ಮಿಲ್ ಉದ್ಯಮ ಸಂಕಷ್ಟದಲ್ಲಿದೆ. ಅಕ್ಕಿ ರಫ್ತಿಗೆ ಅಗತ್ಯ ಭತ್ತ ಇಲ್ಲದ ಕಾರಣ ವಿದೇಶಿ ವ್ಯಾಪಾರಿಗಳು ಬೇರೆ ರಾಜ್ಯಗಳತ್ತ ತೆರಳಿದ್ದಾರೆ. ಸರ್ಕಾರ ರೈಸ್ಮಿಲ್ ಮಾಲೀಕರ ನೆರವಿಗೆ ಧಾವಿಸಿ ಕನಿಷ್ಠ ವಿದ್ಯುತ್ ಶುಲ್ಕದಲ್ಲಾದರೂ ವಿನಾಯಿತಿ ನೀಡಬೇಕು.”
