‘The law was not made for beauty’ – 3 killed in accident involving minor driving: High Court dismisses petition seeking cancellation of case..? – ಅಪ್ರಾಪ್ತರಿಗೆ ವಾಹನಗಳು ಆಟದ ವಸ್ತುವಲ್ಲ ಮತ್ತು ರಸ್ತೆಗಳು ಅವರ ಮೈದಾನವಲ್ಲ ಎಂದು ಕರ್ನಾಟಕ ಹೈಕೋರ್ಟ್ ಕಟುವಾಗಿ ಎಚ್ಚರಿಸಿದೆ. ಕಾರು ಚಲಾಯಿಸಿ ದಂಪತಿ ಹಾಗೂ ಮಗು ಸೇರಿ ಮೂವರ ಸಾವಿಗೆ ಕಾರಣನಾಗಿದ್ದ 14 ವರ್ಷದ ಬಾಲಕನ ತಂದೆ, ತನ್ನ ಮೇಲಿನ ಆರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಇಂತಹ ದುರಂತಗಳಿಗೆ ಹೊಣೆಯಾದವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
- ಅಪಘಾತ ಪ್ರಕರಣದಲ್ಲಿ ಬಾಲಕನ ವಿರುದ್ಧದ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಕಾರ.
- ಸಾರ್ವಜನಿಕ ರಸ್ತೆಯು ಅಂತಹವರ ಭೋಗಕ್ಕೆ ಆಟದ ಮೈದಾನವಾಗಲು ಸಾಧ್ಯವಿಲ್ಲ ಎಂದ ಕೋರ್ಟ್.
- ಬಾಲಕ ವೇಗವಾಗಿ ಕಾರು ಚಲಾಯಿಸಿ ಅಪಘಾತ ಎಸಗಿದ್ದ; 3 ಮಂದಿ ಮೃತಪಟ್ಟಿದ್ದರು.
![]()
ಬೆಂಗಳೂರು: ”ಕಾರು ಮತ್ತು ವಾಹನಗಳ ಸ್ಟೀರಿಂಗ್ ಚಕ್ರವು ಪ್ರಾಪ್ತ ವಯಸ್ಸು ತಲುಪದ ಹದಿಹರೆಯದವರ ಕೈಯಲ್ಲಿನ ಆಟದ ವಸ್ತುವಾಗಲು ಸಾಧ್ಯವಿಲ್ಲ. ಅಲ್ಲದೆ, ಸಾರ್ವಜನಿಕ ರಸ್ತೆಯು ಅಂತಹವರ ಭೋಗಕ್ಕೆ ಆಟದ ಮೈದಾನವಾಗಲು ಸಾಧ್ಯವಿಲ್ಲ,” ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ತಮ್ಮ 14 ವರ್ಷದ ಮಗ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಎನ್.ಆರ್.ಠಾಣೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿ ರದ್ದು ಕೋರಿ ಆರೋಪಿಯ ತಂದೆ ಮೈಸೂರಿನ ನದೀಮ್ ಉರ್ ರಹಮಾನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.
”ಇದೊಂದು ಹೃದಯ ವಿದ್ರಾವಕ ಘಟನೆ. ಅಪ್ರಾಪ್ತ ವಯಸ್ಸಿನ ಬಾಲಕ-ಬಾಲಕಿಯರು ವಾಹನ ಚಲಾಯಿಸುವುದನ್ನು ನಿಷೇಧಿಸುವ ಕಾನೂನು ಕೇವಲ ಚೆಂದಕ್ಕಾಗಿ ರೂಪಿಸಿಲ್ಲ. ತರಬೇತಿ ಪಡೆಯದ ಮತ್ತು ಕಾನೂನುಬದ್ಧವಾಗಿ ಅಸಮರ್ಥರು ಎನಿಸಿದವರು ವಾಹನ ಚಲಾಯಿಸಿದರೆ ಅದರಿಂದ ಎದುರಾಗುವ ದುರಂತಗಳಿಗೆ ಹೊಣೆಯಾದವರಿಗೆ ರಕ್ಷಣೆ ನೀಡಲು ಆಗದು,” ಎಂದು ನ್ಯಾಯಪೀಠ ಹೇಳಿದೆ.
”ಅಲ್ಲದೆ, ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 304 ಭಾಗ-ಐಐ ಅನ್ನು ಐಪಿಸಿ ಕಲಂ 304 ‘ಎ’ ಸ್ಪಷ್ಟವಾಗಿ ಬೇರೆಬೇರೆಯಾಗಿದ್ದು, ದುಡುಕಿನ ಮತ್ತು ನಿರ್ಲಕ್ಷ್ಯದ ಪ್ರಭಾವ ಏನೆಂಬುದನ್ನು ಢಾಳಾಗಿ ವ್ಯಕ್ತಪಡಿಸುತ್ತದೆ,” ಎಂದೂ ನ್ಯಾಯಪೀಠ ಉಲ್ಲೇಖಿಸಿದೆ.
ಅರ್ಜಿದಾರರ ಪರ ವಕೀಲರು, ”ಇದು ಉದ್ದೇಶ ಪೂರ್ವಕವಲ್ಲದ ನರಹತ್ಯೆ ಎಂದು ಪರಿಗಣಿಸಿ ಆರೋಪಪಟ್ಟಿ ರದ್ದುಪಡಿಸಬೇಕು,” ಎಂದು ಕೋರಿದ್ದರು. ಆದರೆ, ಇದನ್ನು ಬಲವಾಗಿ ತಳ್ಳಿ ಹಾಕಿದ್ದ ಪ್ರಾಸಿಕ್ಯೂಷನ್, ”ಅರ್ಜಿದಾರರೂ ಆದ ನದೀಮ್ ಉರ್ ರೆಹಮಾನ್ ತಮ್ಮ ಮಗ ವೋಕ್ಸ್ ವ್ಯಾಗನ್ ವೆಂಟೊ ಕಾರು ಚಲಾಯಿಸಿಕೊಂಡು ಹೋಗುತ್ತೇನೆಂದು ಕೇಳಿದಾಗ ಸ್ವತಃ ಕೀ ಕೊಟ್ಟು ಕಳುಹಿಸಿರುವುದನ್ನು ಆರೋಪಪಟ್ಟಿಯಲ್ಲಿ ದೃಢಪಡಿಸಲಾಗಿದೆ. ಇದು ವಯಸ್ಸಿಗೆ ಬಾರದ ಬಾಲಕನೊಬ್ಬನ ದುಸ್ಸಾಹಸ. ಅಪಘಾತ ನಡೆದದ್ದು ತಿಳಿದ ಕೂಡಲೇ ತಂದೆಯೇ ಸ್ಥಳಕ್ಕೆ ಬಂದು ಮಗನನ್ನು ಕರೆದೊಯ್ದಿದ್ದಾರೆ. ಆದ್ದರಿಂದ, ಪ್ರಕರಣದ ವಿಚಾರಣೆ ನಡೆಯಲೇಬೇಕಿದೆ,” ಎಂದು ಪ್ರತಿಪಾದಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರು-ಮೈಸೂರು ರಸ್ತೆಯಲ್ಲಿನ ದಂಡಿನ ಮಾರಮ್ಮ ದೇವಸ್ಥಾನದ ಬಳಿ 2020ರ ಡಿ.10 ರಂದು ರಾತ್ರಿ ರಮೇಶ (40)-ಉಷಾ (30) ದಂಪತಿ ಮತ್ತು ಅವರ ಮಗ ಮೋನಿಶ್ (5) ಜೊತೆ ಬೈಕ್ನಲ್ಲಿಹೋಗುತ್ತಿದ್ದರು. ಈ ವೇಳೆ ಬಾಲಕ ವೇಗವಾಗಿ ಕಾರು ಚಲಾಯಿಸಿ ಅಪಘಾತ ಎಸಗಿ ಮೂವರ ಸಾವಿಗೆ ಕಾರಣನಾಗಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿಆರೋಪಿಸಲಾಗಿತ್ತು. ‘ಆರೋಪಿ ಬಾಲಕನನ್ನು ಪ್ರಕರಣದಿಂದ ಕೈಬಿಡಬೇಕು’ ಎಂದು ಕೋರಲಾಗಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು.
