‘Aram Re, Aaamku’: MLA Yatnal reveals the truth behind BY Vijayendra, Muragesh Nirani’s meeting, talks – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮುರುಗೇಶ್ ನಿರಾಣಿ ಅವರೊಂದಿಗಿನ ಭೇಟಿ ಕೇವಲ ಆಕಸ್ಮಿಕವಾಗಿದ್ದು, ಯಾವುದೇ ರಾಜಕೀಯ ಒಪ್ಪಂದ ಅಥವಾ ಸಂಧಾನ ನಡೆದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಸಂಧಾನಗಳು ಊಟದ ಮನೆಯಲ್ಲಿ ಆಗುವುದಿಲ್ಲ ಎಂದಿರುವ ಅವರು, ಕಿತ್ತೂರು ಚೆನ್ನಮ್ಮ ಕಾರ್ಯಕ್ರಮ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
- ಬಿಜೆಪಿ ನಾಯಕ ಭೇಟಿ ಊಹಾಪೋಹಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ.
- ನಮ್ಮ ನಡುವೆ ಯಾವುದೇ ಸಂಧಾನವೂ ಆಗಿಲ್ಲ, ಒಪ್ಪಂದವೂ ನಡೆದಿಲ್ಲ ಎಂದ ಯತ್ನಾಳ್.
- ‘ಆರಾಮ ಇದ್ದೀರಾ? ಆರಾಮ್ ರೀ, ಆರಾಮು’ ಎಂದು ಮಾತನಾಡಿದೆವಷ್ಟೇ ಎಂದ ಶಾಸಕ.

ವಿಜಯಪುರ: ಬಿವೈ ವಿಜಯೇಂದ್ರ, ಮುರುಗೇಶ್ ನಿರಾಣಿ ಭೇಟಿ ಬಗೆಗಿನ ಎಲ್ಲಾ ಊಹಾಪೋಹಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. “ನಮ್ಮ ನಡುವೆ ಯಾವುದೇ ಸಂಧಾನವೂ ಆಗಿಲ್ಲ, ಒಪ್ಪಂದವೂ ನಡೆದಿಲ್ಲ” ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ನಾಯಕರ ನಡುವಿನ ಮುಸುಕಿನ ಗುದ್ದಾಟದ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ನಡೆಸಿದ ಭೇಟಿಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಬುಧವಾರ ವಿಜಯಪುರದಲ್ಲಿ ಮಾಧ್ಯಮಗಳೊಂದಿ ಮಾತನಾಡಿದ ಯತ್ನಾಳ್ ಅವರು ಭೇಟಿ ಹಿಂದಿನ ವಾಸ್ತವ ಬಿಚ್ಚಿಟ್ಟಿದ್ದಾರೆ.
ಚಬ್ಬಿ ಗ್ರಾಮದಲ್ಲಿ ನಡೆದಿದ್ದೇನು? : ವಿಜಯೇಂದ್ರ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡ ಹಾಗೂ ಭೇಟಿಯಾದ ಕುರಿತು ಮಾತನಾಡಿದ ಯತ್ನಾಳ್, “ಚಬ್ಬಿ ಗ್ರಾಮದಲ್ಲಿ ಜೈನ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಭೂಮಿಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ನಾವೆಲ್ಲರೂ ಒಟ್ಟಾಗಿ ಹೋಗಿದ್ದೆವು. ಕಾರ್ಯಕ್ರಮ ಮುಗಿದ ನಂತರ ಸ್ಥಳೀಯ ಪತ್ರಕರ್ತರೊಬ್ಬರ ಮನೆಯಲ್ಲಿ ನಮಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.”
“ನಾವು ಊಟ ಮುಗಿಸಿ, ಇನ್ನೇನು ಚಹಾ ಕುಡಿದು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಿ.ವೈ. ವಿಜಯೇಂದ್ರ ಅಲ್ಲಿಗೆ ಬಂದರು. ಪತ್ರಕರ್ತರು ಪಕ್ಷಾತೀತರಾಗಿರುತ್ತಾರೆ, ಅವರ ಮನೆಯಲ್ಲಿ ಕುಳಿತು ರಾಜಕೀಯ ಮಾತಾಡಲು, ಒಪ್ಪಂದ ಮಾಡಿಕೊಳ್ಳಲು ಸಾಧ್ಯವೇ? ಎದುರಿಗೆ ಸಿಕ್ಕಾಗ ಸಾಮಾನ್ಯವಾಗಿ ಎಲ್ಲರೂ ಕೇಳುವಂತೆ ‘ಆರಾಮ ಇದ್ದೀರಾ? ಆರಾಮ್ ರೀ, ಆರಾಮು’ ಎಂದು ಯೋಗಕ್ಷೇಮ ವಿಚಾರಿಸಿಕೊಂಡೆವು ಅಷ್ಟೇ. ಅದನ್ನು ಬಿಟ್ಟು ಅಲ್ಲಿ ಯಾವುದೇ ರಾಜಕೀಯ ಚರ್ಚೆ ಒಂದು ಹನಿಯಷ್ಟೂ ನಡೆದಿಲ್ಲ” ಎಂದು ವಿವರಿಸಿದರು.
ನಿರಾಣಿ ಭೇಟಿ ಕೇವಲ ಆಕಸ್ಮಿಕ : ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಭೇಟಿ ಕುರಿತು ಮಾತನಾಡಿದ ಅವರು, “ಕಳೆದ 30-35 ವರ್ಷಗಳಿಂದಲೂ ಆಯುಧ ಪೂಜೆಯ ದಿನ ನಾರಾಯಣಸಾ ಭಾಂಡಗೆ ಅವರ ಮನೆಗೆ ಹೋಗಿ ದೇವಿಯ ಪ್ರಸಾದ ಸ್ವೀಕರಿಸುವುದು ನನ್ನ ವಾಡಿಕೆ. ಪ್ರತಿ ವರ್ಷದಂತೆ ಈ ಬಾರಿಯೂ ನಾನು ಹೋಗಿದ್ದೆ. ಆಕಸ್ಮಿಕವಾಗಿ ಅವರೂ ನಿರಾಣಿ ಅವರಿಗೆ ಆಹ್ವಾನ ನೀಡಿದ್ದರು, ಹೀಗಾಗಿ ಅವರೂ ಬಂದಿದ್ದರು. ಇಬ್ಬರೂ ಪ್ರಸಾದ ತೆಗೆದುಕೊಂಡು, ನಮ್ಮ ಪಾಡಿಗೆ ನಾವು ನಮ್ಮ ಕಾರಿನಲ್ಲಿ ಹೊರಟೆವು, ಅವರ ಪಾಡಿಗೆ ಅವರು ಹೋದರು. ಇದರಲ್ಲಿ ಯಾವುದೇ ರಾಜಕೀಯ ಒಳಾರ್ಥಗಳಿಲ್ಲ” ಎಂದರು.
ಸಂಧಾನಗಳು ಬೀದಿಯಲ್ಲಿ ಅಥವಾ ಊಟದ ಟೇಬಲ್ ಮೇಲೆ ಆಗಲ್ಲ : ಪಕ್ಷದಲ್ಲಿ ಹೊಂದಾಣಿಕೆ ಅಥವಾ ಸಂಧಾನದ ಕುರಿತ ಪ್ರಶ್ನೆಗಳಿಗೆ ಕಟುವಾಗಿ ಉತ್ತರಿಸಿದ ಯತ್ನಾಳ್, “ರಾಜಕೀಯ ಮಾತುಕತೆ, ಒಪ್ಪಂದ ಅಥವಾ ಸಂಧಾನಗಳು ಈ ರೀತಿ ಸಾರ್ವಜನಿಕವಾಗಿ, ಊಟದ ಮನೆಗಳಲ್ಲಿ ನಡೆಯುವುದಿಲ್ಲ. ಅಂತಹ ಮಾತುಕತೆಗಳು ನಡೆಯಬೇಕಾದರೆ ರಹಸ್ಯ ಸ್ಥಳಗಳಲ್ಲಿ ಅಥವಾ ನೇರವಾಗಿ ದೆಹಲಿ ಹೈಕಮಾಂಡ್ ಮಟ್ಟದಲ್ಲೇ ನಡೆಯುತ್ತವೆ. ನಾವಿನ್ನೂ ಯಾವುದೇ ರಾಜಕೀಯ ತೀರ್ಮಾನಗಳನ್ನು ಕೈಗೊಂಡಿಲ್ಲ” ಎಂದು ಹೇಳಿದರು.
ದೆಹಲಿ ಪ್ರವಾಸ ಹೊರಟಿದ್ದೇನೆ : ತಮ್ಮ ಮುಂದಿನ ದೆಹಲಿ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಶಾಸಕರು, ಅದಕ್ಕೂ ಪಕ್ಷದ ಆಂತರಿಕ ರಾಜಕೀಯಕ್ಕೂ ಸಂಬಂಧವಿಲ್ಲ. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕರೆ ಮಾಡಿ, ವಾಜಪೇಯಿ ಅವರ ಕಾಲದಲ್ಲಿ ಸಂಸತ್ ಭವನದ ಆವರಣದಲ್ಲಿ ಸ್ಥಾಪಿಸಲಾದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಕಂಚಿನ ಪ್ರತಿಮೆಗೆ ಗೌರವ ಸಮರ್ಪಿಸುವ ಕಾರ್ಯಕ್ರಮವಿದೆ ಎಂದು ಆಹ್ವಾನಿಸಿದ್ದಾರೆ. ಅದಕ್ಕಾಗಿ ದೆಹಲಿಗೆ ತೆರಳುತ್ತಿದ್ದೇನೆ.
“ಕೇಂದ್ರ ಸರ್ಕಾರವು ಕಬ್ಬಿನ ಹಾಲು ಹಾಗೂ ಮೊಲಾಸಸ್ನಿಂದ ಎಥನಾಲ್ ಉತ್ಪಾದನೆ ವಿಚಾರದಲ್ಲಿ ಕೈಗೊಂಡಿರುವ ಇತ್ತೀಚಿನ ನಿರ್ಧಾರದಿಂದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.
“ನಾನು ಪಕ್ಷದಲ್ಲಿ ಸ್ಥಾನಮಾನ ನೀಡಿ ಎಂದು ದೆಹಲಿಯ ಯಾವ ರಾಷ್ಟ್ರೀಯ ನಾಯಕರ ಮುಂದೆಯೂ ಕೈಕಟ್ಟಿ ನಿಲ್ಲುವುದಿಲ್ಲ, ಅಂಗಲಾಚಿ ಬೇಡುವುದಿಲ್ಲ. ಬೇಕಿದ್ದರೆ ಮಾಧ್ಯಮಗಳೇ ನನ್ನ ಹಿಂದೆ ಗುಪ್ತಚರರನ್ನು ಬಿಟ್ಟು ನೋಡಿಕೊಳ್ಳಲಿ” ಎಂದು ಸವಾಲು ಹಾಕಿದರು.
ನನಗೆ ಒಳ್ಳೆಯ ಕಾಲ ಬಂದೇ ಬರುತ್ತದೆ : ವಿಜಯದಶಮಿ ಬಳಿಕ ನಿಮಗೆ ಒಳ್ಳೆಯ ಕಾಲ ಬರಲಿದೆ ಎಂದು ಹೇಳುತ್ತಿದ್ದಿರಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, “ನನಗೆ ಒಳ್ಳೆಯ ಕಾಲ ಬರುವುದಂತೂ ಖಚಿತ. ವಿಜಯಪುರದ ನಡುಬೀದಿಯಲ್ಲಿ ನಿಂತು ಯಾರೇ ಎಷ್ಟೇ ಶಂಖ ಊದಿದರೂ, ಅಪಸ್ವರ ಎತ್ತಿದರೂ ನನಗೆ ಒಳ್ಳೆಯ ಕಾಲ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಪೂರ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
