Today is the birthday of India’s biggest superstar, Rebel Star Prabhas. Here are the next films of the king of the cinema world… each one different from the other – “ಯಾವಾಗ ತೆರೆಯ ಮೇಲೆ ಆ ಪ್ರಚಂಡ ವ್ಯಕ್ತಿತ್ವ ಪ್ರವೇಶಿಸುತ್ತದೆಯೋ, ಅಲ್ಲಿ ಕೇವಲ ಸಿನಿಮಾವಷ್ಟೇ ಅಲ್ಲ, ಇಡೀ ಒಂದು ಹೊಸ ಜಗತ್ತೇ ಸೃಷ್ಟಿಯಾಗುತ್ತದೆ…” ಹೌದು, ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಸಾಮ್ರಾಜ್ಯದ ಅಧಿಪತಿ, ಪ್ಯಾನ್-ಇಂಡಿಯಾ ಸ್ಟಾರ್ಡಮ್ನ ಹಿರಿಮೆಯನ್ನು ಜಗತ್ತಿಗೆ ಸಾರಿದ ‘ರೆಬೆಲ್ ಸ್ಟಾರ್’ ಪ್ರಭಾಸ್ ಇಂದು (ಅ.23) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭವಿಷ್ಯದ ಸೈನ್ಸ್ ಫಿಕ್ಷನ್ನಿಂದ ಹಿಡಿದು, ರಕ್ತಸಿಕ್ತ ಆಕ್ಷನ್ ಡ್ರಾಮಾ ಹಾಗೂ ಇತಿಹಾಸದ ಪುಟಗಳಲ್ಲಿ ಅಡಗಿರುವ ವೀರಯೋಧರ ಕಥೆಗಳವರೆಗೆ— ಇಂದು ಭಾರತೀಯ ಸಿನಿಮಾದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ಗಳ ಪ್ರಮುಖ ಮುಖವಾಗಿ ಪ್ರಭಾಸ್ ನಿಂತಿದ್ದಾರೆ. ನಿರ್ದೇಶಕರು ದೊಡ್ಡ ಬಜೆಟ್ನ, ಕಲ್ಪನೆಗೂ ಮೀರಿದ ಬೃಹತ್ ಸಿನಿಮಾಗಳನ್ನು ನಿರ್ಮಿಸಲು ಧೈರ್ಯ ಮಾಡುತ್ತಾರೆ ಎಂದಾದರೆ, ಅದರ ಹಿಂದಿರುವ ಏಕೈಕ ಭರವಸೆ ‘ಪ್ರಭಾಸ್ ಫ್ಯಾಕ್ಟರ್’! ಅವರ ಅಗಾಧ ಅಭಿಮಾನಿ ಬಳಗ, ಗಡಿಗಳನ್ನು ಮೀರಿ ನಿಂತಿರುವ ಜನಪ್ರಿಯತೆ ಮತ್ತು ತೆರೆಯ ಮೇಲೆ ಅಕ್ಷರಶಃ ಜೀವ ತುಂಬುವ ಲಾರ್ಜರ್ ದೆನ್ ಲೈಫ್ ಪಾತ್ರಗಳೇ ಅವರ ಈ ಅಸಾಧಾರಣ ಯಶಸ್ಸಿನ ಗುಟ್ಟು.
ಪ್ರಭಾಸ್ ಮುಂಬರುವ ಸಿನಿಮಾಗಳ ಲೈನಪ್…
ಕಲ್ಕಿ 2898 AD: ವಿಜ್ಞಾನ ಮತ್ತು ಭಾರತೀಯ ಪೌರಾಣಿಕತೆಯನ್ನು ಅದ್ಭುತವಾಗಿ ಬೆಸೆದ ನಾಗ್ ಅಶ್ವಿನ್ ಅವರ ಬ್ರಹ್ಮಾಂಡದಲ್ಲಿ ಪ್ರಭಾಸ್ ‘ಭೈರವ’ನಾಗಿ ಹೊಸ ಇತಿಹಾಸ ಬರೆದಿದ್ದಾರೆ. ಕತ್ತಲೆಯುಕ್ತ ಭವಿಷ್ಯದ ಲೋಕದಲ್ಲಿ ಬೌಂಟಿ ಹಂಟರ್ ಆಗಿ ಆರಂಭವಾದ ಆ ಪಾತ್ರ, ಮಹಾಭಾರತದ ಮಹಾನ್ ಯೋಧ ‘ಕರ್ಣ’ನೊಂದಿಗೆ ಬೆಸೆದುಕೊಂಡ ರೋಚಕತೆಯನ್ನು ಜಗತ್ತೇ ಕಣ್ತುಂಬಿಕೊಂಡಿದೆ. ಕಲ್ಕಿಯ ಆಗಮನದ ಕಡೆಗೆ ಕಥೆ ಸಾಗುತ್ತಿದ್ದಂತೆ, ಮುಂದಿನ ಭಾಗದಲ್ಲಿ ಪ್ರಭಾಸ್ ಅವರ ಪಾತ್ರವು ಇಡೀ ಬ್ರಹ್ಮಾಂಡದ ಗತಿಯನ್ನೇ ಬದಲಾಯಿಸಲಿರುವ ಮಹಾಸಂಗ್ರಾಮದ ಕೇಂದ್ರಬಿಂದುವಾಗಲಿದೆ.
ಸ್ಪಿರಿಟ್: ಸಂದೀಪ್ ರೆಡ್ಡಿ ವಂಗಾ ಅವರ ಕಥೆಗಾರಿಕೆ ಮತ್ತು ರಾ ಸ್ಟೈಲ್ನಿಂದಲೇ ಫೇಮಸ್. ಪ್ರಭಾಸ್ ಅವರನ್ನು ಸಂಪೂರ್ಣವಾಗಿ ಹೊಸ ಮತ್ತು ರಕ್ತಸಿಕ್ತ ಅವತಾರದಲ್ಲಿ ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಪ್ರಭಾಸ್ ಅವರ ಅಪ್ರತಿಮ ಸ್ಕ್ರೀನ್ ಪ್ರೆಸೆನ್ಸ್ ಅನ್ನು ವಂಗಾ ಯಾವ ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ಕುತೂಹಲ ಈಗಲೇ ಕೋಟ್ಯಂತರ ಅಭಿಮಾನಿಗಳಲ್ಲಿ ಕಾತರ ಮೂಡಿಸಿದೆ.
ಸಲಾರ್: ಪಾರ್ಟ್ 2 – ಶೌರ್ಯಂಗ ಪರ್ವಮ್: ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಖಾನ್ಸಾರ್’ ಸಾಮ್ರಾಜ್ಯದ ರಕ್ತರಂಜಿತ ಜಗತ್ತನ್ನು ಯಾರು ತಾನೇ ಮರೆಯಲು ಸಾಧ್ಯ? ಸ್ನೇಹ, ಅಧಿಕಾರ ಮತ್ತು ದ್ರೋಹದ ಸುಳಿಗೆ ಸಿಲುಕಿದ ‘ದೇವ’ನ ಪಾತ್ರವು ಕೇವಲ ಆಕ್ಷನ್ ಮಾತ್ರವಲ್ಲದೆ, ರಾಜಕೀಯ ಪೈಪೋಟಿಯ ಭೀಕರ ಮುಖವನ್ನು ಅನಾವರಣಗೊಳಿಸಿತ್ತು. ಈಗ ಸೀಕ್ವೆಲ್ನಲ್ಲಿ ಈ ಸಾಮ್ರಾಜ್ಯದ ಕಾಳಗ ಮತ್ತಷ್ಟು ಎತ್ತರಕ್ಕೇರಲಿದೆ.
ಫೌಜಿ: ಹನು ರಾಘವಪುಡಿ ನಿರ್ದೇಶನದ ಈ ಚಿತ್ರವು ನಮ್ಮನ್ನು ನೇರವಾಗಿ 1940ರ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟಕ್ಕೆ ಕೊಂಡಯ್ಯಲಿದೆ. ಮಹಾಭಾರತದ ಯೋಧರಾದ ಅರ್ಜುನ, ಕರ್ಣ ಹಾಗೂ ಏಕಲವ್ಯರ ಸ್ಪರ್ಶವಿರುವ, ತ್ಯಾಗ ಮತ್ತು ದೇಶಭಕ್ತಿಯನ್ನು ಮೈತುಂಬಿಕೊಂಡ ದೈತ್ಯ ಸೈನಿಕನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಇತಿಹಾಸದ ಮರೆತುಹೋದ ಪುಟಗಳನ್ನು ತೆರೆಯುವ ಈ ಎರಡು ಭಾಗಗಳ ಮಹಾಕಾವ್ಯವು ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಹೊರಟಿದೆ.
ಬಾಹುಬಲಿ: ದಿ ಎಟರ್ನಲ್ ವಾರ್: ಎಸ್.ಎಸ್. ರಾಜಮೌಳಿ ಪ್ರಸ್ತುತಪಡಿಸುತ್ತಿರುವ, ಇಶಾನ್ ಶುಕ್ಲಾ ನಿರ್ದೇಶನದ ಈ ಎರಡು ಭಾಗಗಳ 3D ಅನಿಮೇಟೆಡ್ ಫ್ಯಾಂಟಸಿ ಚಿತ್ರದಲ್ಲಿ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ‘ಅಮರೇಂದ್ರ ಬಾಹುಬಲಿ’ಯ ಗಡಸು ಧ್ವನಿಯಾಗಿ ಪ್ರಭಾಸ್ ಮತ್ತೊಮ್ಮೆ ಮರಳುತ್ತಿದ್ದಾರೆ.
ಸಿನಿಮಾದ ಗಡಿಗಳನ್ನು ಮೀರಿ ನಿಂತ ಮಹಾನಾಯಕ : ಸಾಂಪ್ರದಾಯಿಕ ಕಥೆಗಾರಿಕೆಯ ಚೌಕಟ್ಟುಗಳನ್ನು ಮುರಿದು, ಕಲ್ಪನೆಗೂ ನಿಲುಕದ ದೃಶ್ಯಕಾವ್ಯಗಳನ್ನು ತೆರೆಯ ಮೇಲೆ ಸಾಕಾರಗೊಳಿಸಲು ನಿರ್ದೇಶಕರಿಗೆ ಅತಿ ದೊಡ್ಡ ನಂಬಿಕೆಯ ಬಂಡವಾಳವಾಗಿ ನಿಂತಿರುವುದು ಇದೇ ಪ್ರಭಾಸ್. ಭಾಷೆ, ಜಾತಿ, ಪ್ರದೇಶ ಹಾಗೂ ತಲೆಮಾರಿನ ಎಲ್ಲೆಗಳನ್ನು ಮೀರಿ ನಿಂತಿರುವ ಅವರ ಈ ಜನಪ್ರಿಯತೆಯು ಭಾರತೀಯ ಸಿನಿಮಾಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿದೆ.
ಇಂದು ಜನ್ಮದಿನದ ಈ ಶುಭ ದಿನದಂದು, ಪ್ರಭಾಸ್ ಅವರ ಯಶಸ್ಸನ್ನು ಕೇವಲ ಅವರು ನಟಿಸಿದ ಸಿನಿಮಾಗಳ ಸಂಖ್ಯೆಯಿಂದ ಅಳೆಯಲಾಗದು; ಬದಲಿಗೆ, ಮಹತ್ವಾಕಾಂಕ್ಷೆಯ ಸಿನಿಮಾ ನಿರ್ಮಾಪಕರು ಮತ್ತು ನಿರ್ದೇಶಕರು ಅವರ ಸುತ್ತಲೂ ಕಟ್ಟಲು ಬಯಸುವ ಆ ಅದ್ಭುತ, ಭವ್ಯ ಸಿನಿಮೀಯ ವಿಶ್ವಗಳ ಮೂಲಕವೇ ಅವರನ್ನು ಅತ್ಯುತ್ತಮವಾಗಿ ಅರಿಯಬಹುದು! ವನ್ಸ್ ಅಗೇನ್ ಹ್ಯಾಪಿ ಬರ್ತ್ಡೇ ರೆಬೆಲ್ ಸ್ಟಾರ್ ಪ್ರಭಾಸ್!



