Police complaint against actor Dhanveer; Darshan’s wife Vijayalakshmi’s manager makes many allegations – ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ಗೆ ಫೋನ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ನಟ ಧನ್ವೀರ್ ಗೌಡ ವಿರುದ್ಧ ಆರ್.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ಸ್ಟಾಗ್ರಾಮ್ ಪೋಸ್ಟ್ಗಳ ಸಂಘರ್ಷವೇ ಈ ಜಗಳಕ್ಕೆ ಕಾರಣ ಎನ್ನಲಾಗಿದ್ದು, ಆಡಿಯೋ ಸಾಕ್ಷ್ಯ ನೀಡಲಾಗಿದೆ. ಈ ಸಂಬಂಧ ಪೊಲೀಸರು ಧನ್ವೀರ್ಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆಯಿದೆ.
- ನಟ ಧನ್ವೀರ್ ಗೌಡ ಅವರ ವಿರುದ್ಧ ಪೊಲೀಸ್ ದೂರು ದಾಖಲು.
- ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ರಿಂದ ದೂರು.
- ಇನ್ಸ್ಟಾಗ್ರಾಮ್ ಪೋಸ್ಟ್ಗಳ ಸಂಘರ್ಷವೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ.
![]()
ಬೆಂಗಳೂರು: ನಟ ದರ್ಶನ್ ತೂಗುದೀಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ಬಂದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಆಪ್ತ ಸಹಾಯಕ (ಮ್ಯಾನೇಜರ್) ನಾಗರಾಜ್ ಎಂಬುವವರು ದೂರು ನೀಡಿದ್ದಾರೆ.
ಧನ್ವೀರ್ ಅವರು ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿದ್ದಾರೆ ಎಂದು ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಕರೆ ಸಂಭಾಷಣೆಯ ಆಡಿಯೋ ದಾಖಲೆಯನ್ನು ಸಂಗ್ರಹಿಸಿದ ನಾಗರಾಜ್, ನೇರವಾಗಿ ಆರ್.ಆರ್. ನಗರ ಪೊಲೀಸರಿಗೆ ಸಾಕ್ಷ್ಯ ಸಮೇತ ದೂರು ನೀಡಿದ್ದಾರೆ. ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ವಿವಾದಕ್ಕೆ ತುಪ್ಪ ಸುರಿದಿದ್ದೇ ಇನ್ಸ್ಟಾಗ್ರಾಮ್ ಜಟಾಪಟಿ!
ಜಾಲತಾಣದ ಈ ಮುಸುಕಿನ ಗುದ್ದಾಟ ಅಂತಿಮವಾಗಿ ವೈಯಕ್ತಿಕ ಸಂಘರ್ಷಕ್ಕೆ ತಿರುಗಿದೆ. ಪೋಸ್ಟ್ಗಳ ಹಿನ್ನೆಲೆಯಲ್ಲಿ ಕೆರಳಿದ ಧನ್ವೀರ್, ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ಗೆ ಕರೆ ಮಾಡಿ ಕೆಟ್ಟ ಮಾತುಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಕೆಲವರು ದರ್ಶನ್ ಅವರ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂಬರ್ಥದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದರು.
ಇದಕ್ಕೆ ಪ್ರತಿಯಾಗಿ ನಟ ಧನ್ವೀರ್ ಗೌಡ ಕೂಡ ಪರೋಕ್ಷವಾಗಿ ತಿರುಗೇಟು ನೀಡಿ, “ಬೇರೆಯವರ ಮೇಲೆ ಗೂಬೆ ಕೂರಿಸಿ, ಕೊನೆಗೆ ತಾವೇ ಸಂತ್ರಸ್ತರೆಂಬಂತೆ ವರ್ತಿಸುವುದು ಕೆಲವರ ಜಾಯಮಾನ. ಹೆದರಿಸುವುದು ನಿಮ್ಮ ಚಾಳಿಯಾದರೆ, ಅದನ್ನು ಎದುರಿಸಿ ನಿಲ್ಲುವುದು ನನ್ನ ಗುಣ” ಎಂಬ ಧಾಟಿಯಲ್ಲಿ ಆಕ್ರೋಶ ಹೊರಹಾಕಿದ್ದರು. ಈ ಪೋಸ್ಟ್ಗಳು ಅಭಿಮಾನಿ ವಲಯದಲ್ಲಿ ಭಾರೀ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದವು.
ರೇಣುಕಸ್ವಾಮಿ ಪ್ರಕರಣದ ಸಂದರ್ಭದಲ್ಲಿ ದರ್ಶನ್ ಅವರ ಪರವಾಗಿ ನಿಂತು, ಅವರ ನೆರಳಿನಂತೆ ಓಡಾಡಿಕೊಂಡಿದ್ದವರು ಧನ್ವೀರ್. ದರ್ಶನ್ ಅವರ ಕುಟುಂಬಕ್ಕೂ ಧನ್ವೀರ್ ಅತ್ಯಂತ ಆಪ್ತರಾಗಿದ್ದರು. ಅಂತಹ ವ್ಯಕ್ತಿಯೇ ಇದೀಗ ದರ್ಶನ್ ಅವರ ಪತ್ನಿಯ ಮ್ಯಾನೇಜರ್ ಜತೆ ಜಗಳಕ್ಕಿಳಿದಿರುವುದು, ಸ್ವತಃ ದರ್ಶನ್ ಕುಟುಂಬದ ಜತೆಗೇ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ದೂರಿನಲ್ಲಿರುವ ಆಡಿಯೋ ಸಂಭಾಷಣೆಯ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
