Secret of IED blast in Bengaluru revealed: Friends sketched the bomb to kill – ಸ್ಫೋಟ ಸಂಭವಿಸಿದ 72 ಗಂಟೆಗಳಲ್ಲಿಆರೋಪಿಗಳನ್ನು ಪತ್ತೆಹಚ್ಚಿ ಪ್ರಕರಣವನ್ನು ಇತ್ಯರ್ಥಪಡಿಸಿದ ಪೂರ್ವವಿಭಾಗದ ಪೊಲೀಸರ ಕಾರ್ಯವೈಖರಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ತನಿಖಾ ತಂಡಕ್ಕೆ ಮೂರು ಲಕ್ಷ ರೂ.ನಗದು ಬಹುಮಾನ ಘೋಷಿಸಿ ಭಾನುವಾರ ಅಭಿನಂದನೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಆಯುಕ್ತರು, ‘‘ಅಪರಿಚಿತರು ಮೊಬೈಲ್ ಕೇಳಿದರೂ ಸಾರ್ವಜನಿಕರು ನೀಡಬಾರದು. ಜತೆಗೆ, ಅಪರಿಚಿತರು ಕಳಿಸುವ ಪಾರ್ಸೆಲ್ ತೆಗೆದುಕೊಳ್ಳಬಾರದು,’’ ಎಂದು ಸಲಹೆ ನೀಡಿದರು.
- ಮುರಿದು ಬಿದ್ದ ಯುವತಿ ಮದುವೆ ಗೆಳೆಯನ ಕೊಲ್ಲಲು ಆರೋಪಿಗಳು ಸ್ಕೆಚ್.
- ಬೆಂಗಳೂರಿನಲ್ಲಿ ಐಇಡಿ ಸ್ಫೋಟದ ರಹಸ್ಯ ಪೊಲೀಸ್ ತನಿಖೆಯಿಂದ ಬಹಿರಂಗ.
- ಪ್ರಕಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
![]()
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿಸಂಭವಿಸಿದ್ದ ಸುಧಾರಿತ ಸ್ಫೋಟಕ ಸಾಧನ ಬಾಂಬ್ ಸ್ಫೋಟದ ಹಿಂದಿನ ಅಸಲಿ ಸತ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿರುವ ಪೂರ್ವ ವಿಭಾಗದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಬುರ್ಹಾನ್ ಅಹಮದ್ ಬುರ್ದ್ವಯಾ (20), ಜಹಿದುಲ್ ಹುಸೇನ್ ಬುರ್ದ್ವಯಾ (27), ಸಜಿದುಲ್ ಲಷ್ಕರ್ (22) ಬಂಧಿತರು. ಆರೋಪಿಗಳು ವೈಯಕ್ತಿಕ ದ್ವೇಷ ಹಾಗೂ ಯುವತಿ ಮದುವೆ ಮುರಿದು ಬೀಳಲು ಕಾರಣನಾಗಿದ್ದ ಸ್ನೇಹಿತ ಅಲ್ಲಾವುದ್ದೀನ್ ಕೊಲೆ ಮಾಡುವ ಉದ್ದೇಶದಿಂದ ಐಇಡಿ ಬಾಂಬ್ ಸ್ಫೋಟಿಸಿರುವುದು ತನಿಖೆಯಲ್ಲಿ ವೇದ್ಯವಾಗಿದೆ.
ಈ ಮೂಲಕ ಸ್ಫೋಟದ ಹಿಂದೆ ಭಯೋತ್ಪಾದನಾ ಕೃತ್ಯದ ಶಂಕೆ ದೂರವಾಗಿದೆ. ಪಕ್ಕಾ ಸಿನಿಮಾ ಶೈಲಿಯಲ್ಲಿಸಣ್ಣ ಸುಳಿವೂ ಸಿಗದಂತೆ ಆರೋಪಿಗಳು ಎಸಗಿರುವ ಕೃತ್ಯದ ಇಂಚಿಂಚೂ ಮಾಹಿತಿಯು ವಿಚಾರಣೆ ವೇಳೆ ಬಯಲಾಗಿರುವುದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
ಎಐ ಸಹಾಯದಿಂದ ಬಾಂಬ್ ತಯಾರಿ : ಅಸ್ಸಾಂನ ಹೈಲ್ಕಂಡಿ ಜಿಲ್ಲೆದಿನನಾಥ್ಪುರ ಜಹಿದುಲ್, ಅಲ್ಲಾವುದ್ದೀನ್ ಬಾಲ್ಯ ಸ್ನೇಹಿತರು ಹಾಗೂ ಸಂಬಂಧಿಕರು. ಸಾಜಿದುಲ್ ಹಾಗೂ ಬುರ್ಹಾನ್ ಕೂಡ ಅದೇ ಗ್ರಾಮದವರಾಗಿದ್ದು, ಉದ್ಯೋಗ ಅರಸಿ ಎಲ್ಲರೂ ಬೆಂಗಳೂರಿಗೆ ಬಂದಿದ್ದರು.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿಬುರ್ಹಾನ್ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಜಯನಗರದ ಬೇಕರಿಯೊಂದರಲ್ಲಿ ಜಹಿದುಲ್ ಕೆಲಸಕ್ಕಿದ್ದ. ಸಜಿದುಲ್ ಮಲ್ಲೇಶ್ವರಂನ ಹೋಟೆಲ್ವೊಂದರಲ್ಲಿಕಾರ್ಮಿಕನಾಗಿದ್ದ. ಅಲ್ಲಾವುದ್ದೀನ್, ಪುಲಕೇಶಿನಗರದ ಐದಂತಸ್ತಿನ ಕಟ್ಟಡಕ್ಕೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ.
ಊರಿನಲ್ಲಿಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಾವುದ್ದೀನ್ ಹಾಗೂ ಜಹಿದುಲ್ ನಡುವೆ ಜಗಳ ನಡೆದಿತ್ತು. ಇದರಿಂದ ಜಹಿದುಲ್ ತಂಗಿಯ ಮದುವೆ ಕೂಡ ಕ್ಯಾನ್ಸಲ್ ಆಗಿತ್ತು. ಇದಕ್ಕೆ ಅಲ್ಲಾವುದ್ದೀನ್ ಕಾರಣ ಎಂದು ಹಗೆ ಸಾಧಿಸುತ್ತಿದ್ದ ಜಹಿದುಲ್, ಅವನನ್ನು ಕೊಲೆ ಮಾಡಲು ನಿರ್ಧರಿಸಿ ಬುರ್ಹಾನ್ಗೆ ವಿಚಾರ ತಿಳಿಸಿದ್ದ. ಅವನು ಬಾಂಬ್ ಇಟ್ಟು ಕೊಲ್ಲುವ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಟನೇ ತರಗತಿ ಓದಿರುವ ಬುರ್ಹಾನ್, ತನಗಿರುವ ಎಲೆಕ್ಟ್ರಿಕ್ ರಿಪೇರಿ ಕೆಲಸದಿಂದಲೇ ಬಾಂಬ್ ತಯಾರಿಸಲು ಸಿದ್ಧನಾಗಿದ್ದ. ಐಇಡಿ ತಯಾರಿಸುವುದು ಹೇಗೆ ಎಂಬುದನ್ನು ಕೆಲ ವೆಬ್ಸೈಟ್ ಹಾಗೂ ವಿಡಿಯೊಗಳನ್ನು ನೋಡಿ ತಿಳಿದುಕೊಂಡಿದ್ದ. ಜತೆಗೆ, ಕೃತಕ ಬುದ್ಧಿಮತ್ತೆ ಚಾಟ್ಬಾಟ್ನ ಸಹಾಯ ಪಡೆದಿದ್ದ.
ಕೆಲವು ಶಾಪ್ಗಳಲ್ಲಿಬಾಂಬ್ ತಯಾರಿಗೆ ಬೇಕಾದ ಗನ್ ಪೌಡರ್, ಪಟಾಕಿ ಮದ್ದು, ಬಾಲ್ ಬೇರಿಂಗ್, ಬ್ಯಾಟರಿ ಸರ್ಕೀಟ್ ಹಾಗೂ ಬಟನ್ ಸೇರಿ ಇತರೆ ವಸ್ತು ಖರೀದಿಸಿದ್ದ. ಬಳಿಕ ಆನ್ಲೈನ್ ಸಹಾಯದಿಂದಲೇ ಮಸ್ಕಿಯ ತನ್ನ ಬಾಡಿಗೆ ಮನೆಯಲ್ಲಿಐಇಡಿ ತಯಾರಿಸಿ ಅದನ್ನು ಪಾರ್ಸೆಲ್ ಬಾಕ್ಸ್ನಲ್ಲಿಟ್ಟು ಬಸ್ನಲ್ಲಿಬೆಂಗಳೂರಿಗೆ ತಂದಿದ್ದ. ನಂತರ ಅಲ್ಲಾವುದ್ದೀನ್ ಕೆಲಸ ಮಾಡುವ ಕಟ್ಟಡದ ಸಮೀಪದ ಪೆಟ್ಟಿಗೆ ಅಂಗಡಿಯೊಂದರಲ್ಲಿಅ.19ರಂದು ಪಾರ್ಸೆಲ್ ಇಟ್ಟು ಹೋಗಿದ್ದರು.
ಆರೋಪಿಗಳು ಬಾಂಬ್ ತಯಾರಿ ಹಾಗೂ ಬಾಂಬ್ ಇಡುವ ಸಂಬಂಧಿತ ಚರ್ಚೆಗಾಗಿ ಪ್ರತ್ಯೇಕ ವಾಟ್ಸ್ಯಾಪ್ ಗ್ರೂಪ್ ರಚಿಸಿದ್ದರು. ಅದರ ಮೂಲಕವೇ ಸಂವಹನ ನಡೆಸುತ್ತಿದ್ದರು. ಈ ಕುರಿತು ತಾಂತ್ರಿಕ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದರು.
1 ದಿನ ತಡವಾಗಿ ಸ್ಫೋಟ : ಪೊಲೀಸರಿಗೆ ಯಾವುದೇ ಕಾರಣಕೂ ತನ್ನ ಸುಳಿವು ಸಿಗಬಾರದು ಎಂದು ಲೆಕ್ಕಾಚಾರ ಹಾಕಿದ್ದ ಬುರ್ಹಾನ್, ಅ.19ರಂದು ಬೀದಿ ಬದಿ ವ್ಯಾಪಾರಿಗಳ ಬಳಿ ಮೊಬೈಲ್ ಪಡೆದು ಅಲ್ಲಾವುದ್ದೀನ್ಗೆ ಕರೆ ಮಾಡಿ ಹಿಂದಿಯಲ್ಲಿ‘ನಿನಗೆ ಪಾರ್ಸೆಲ್ ಬಂದಿದೆ ತಗೋ’ ಎಂದು ಪದೇ ಪದೇ ಹೇಳಿದ್ದ. ಆದರೆ, ಅಲ್ಲಾವುದ್ದೀನ್ಗೆ ಅಸ್ಸಾಮಿ ಹಾಗೂ ಸಿಲ್ಹೇಟಿ ಭಾಷೆ ಬಿಟ್ಟು ಹಿಂದಿ ಬರುತ್ತಿರಲಿಲ್ಲ. ಹೀಗಾಗಿ, ಮೊಬೈಲ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಸೂರಜ್ಕುಮಾರ್ಗೆ ಕೊಟ್ಟಿದ್ದ. ಸೂರಜ್ ಪೆಟ್ಟಿಗೆ ಅಂಗಡಿಯಲ್ಲಿದ್ದ ಪಾರ್ಸೆಲ್ ಕೂಡ ತಂದಿದ್ದ. ಆದರೆ, ಅದನ್ನು ಓಪನ್ ಮಾಡಿರಲಿಲ್ಲ.
ಒಂದು ದಿನ ಕಳೆದರೂ ಐಇಡಿ ಸ್ಫೋಟಿಸಿಲ್ಲಎಂದು ಕಂಗಾಲಾದ ಬುರ್ಹಾನ್ ಮಾರನೇ ದಿನ (ಅ.20) ಪುನಃ ಬೇರೆ ಬೇರೆಯವರ ಮೊಬೈಲ್ ಪಡೆದು ಅಲ್ಲಾವುದ್ದೀನ್ಗೆ ಕರೆ ಮಾಡಿ ಪಾರ್ಸೆಲ್ನ ತೆರೆದು ಟಾರ್ಚ್ ಬಟನ್ ಆನ್ ಮಾಡುವಂತೆ ಪುನಃ ಹಿಂದಿಯಲ್ಲಿ ಹೇಳಿದ್ದ. ಇದನ್ನು ಕೇಳಿಸಿಕೊಂಡ ಸೂರಜ್, ಬಟನ್ ಒತ್ತುತ್ತಿದ್ದಂತೆ ಅದು ಸ್ಫೋಟಿಸಿತ್ತು. ಪರಿಣಾಮ ಸೂರಜ್ ಎರಡೂ ಕೈಗಳಿಗೆ ಗಂಭೀರ ಪೆಟ್ಟಾಗಿತ್ತು. ಪಕ್ಕದಲ್ಲಿದ್ದ ಅಲ್ಲಾವುದ್ದೀನ್ಗೂ ಗಾಯಗಳಾಗಿದ್ದು, ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.
1500 ಸಿಸಿಟಿವಿ, 100 ಮಂದಿ ಶಂಕಿತರ ವಿಚಾರಣೆ : ಐಇಡಿ ಬಾಂಬ್ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ, ಆರೋಪಿಗಳ ಪತ್ತೆ ಹಾಗೂ ತನಿಖೆಗೆ 10 ವಿಶೇಷ ತಂಡಗಳನ್ನು ರಚಿಸಿದ್ದರು. ಹತ್ತಾರು ಆಯಾಮಗಳಲ್ಲಿತನಿಖೆ ಕೈಗೊಂಡ ಪೊಲೀಸರು, ಸುಮಾರು 1,500ಕ್ಕೂ ಸಿಸಿಟಿವಿಗಳ ದೃಶ್ಯಾವಳಿ ಪರಿಶೀಲಿಸಿದ್ದರು. 100ಕ್ಕೂ ಅಧಿಕ ಮಂದಿ ಶಂಕಿತರ ವಿಚಾರಣೆ ನಡೆಸಿದ್ದರು. ಜತೆಗೆ, ಗಾಯಾಳು ಅಲ್ಲಾವುದ್ದೀನ್ಗೆ ಬಂದಿದ್ದ ಕರೆಗಳ ಜಾಡು ಹಿಡಿದು ಅಂತಿಮವಾಗಿ ಮೂವರನ್ನು ಸೆರೆಹಿಡಿಯುವಲ್ಲಿಯಶಸ್ವಿಯಾಗಿದ್ದಾರೆ.
